ಬೆಂಗಳೂರು: ಕರ್ನಾಟಕದ ಅತಿ ದೊಡ್ದ ಡಿಜಿಟಲ್ ಅರೆಸ್ಟ್ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಯೋರ್ವರಿಂದ ಬರೋಬ್ಬರಿ 24 ಕೋಟಿ ರೂಪಾಯಿ ಹಣ ದೋಚಿದ್ದ ಐವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಸೈಬರ್ ವಂಚಕರ ಹಣದ ದಾಹಕ್ಕೆ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್ನಲ್ಲಿ ಅಡ ಇಡಲು ಬಂದು ವೃದ್ಧೆ ಬಚಾವ್ ಆಗಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಸೈಬರ್ ವಂಚನೆಯ ಜಾಲವನ್ನು ಬಂಧಿಸಲಾಗಿದೆ.
ಕಳೆದ ಜನವರಿಯಿಂದ ಮೇವರೆಗೂ ವೃದ್ಧೆಯನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಹಂತ ಹಂತವಾಗಿ ಬರೋಬರಿ 24 ಕೋಟಿ ರೂಪಾಯಿ ದೋಚಿರುವುದು ಬೆಳಕಿಗೆ ಬಂದಿದೆ.
ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ಎಂಬವವರು ತಮ್ಮ ಆಸ್ತಿ ಮಾರಿ ಬಂದಿದ್ದ ಕೋಟ್ಯಾಂತರ ರೂಪಾಯಿ ಹಣವನ್ನು ಬ್ಯಾಂಕ್ ನಲ್ಲಿ ಇಟ್ತಿದ್ದರು. ಇವರ ಬ್ಯಾಂಕ್ ವಹಿವಾಟು ಮಾಹಿತಿ ಪಡೆದ ಆರೋಪಿಗಳು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಅವರನ್ನು ಬೆದರಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಹೆಸರಲ್ಲಿ ಲಕ್ಷ್ಮೀ ಅವರಿಗೆ ಭಯ ಹುಟ್ಟಿಸಿದ್ದ ಖದೀಮರು, ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 24 ಕೋಟಿ ರೂಪಾಯಿ ಹಣವನ್ನು ಅವರಿಂದ ಪೀಕಿದ್ದಾರೆ.
24 ಕೋಟಿ ಹಣ ಪಡೆದರೂ ವಂಚಕರ ಹಣದ ದಾಹ ಕಡಿಮೆಯಾಗಿಲ್ಲ. ಇನ್ನಷ್ಟು ಹಣ ನೀಡುವಂತೆ ಒತ್ತಾಯಿಸಿ ಹೆದರಿಸತೊಡಗಿದ್ದಾರೆ. ಹೀಗಾಗಿ ವೃದ್ಧೆ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನವನ್ನ ಅಡಿಟ್ಟು ಹಣ ಪಡೆಯಲು ಬ್ಯಾಂಕ್ಗೆ ತೆರಳಿದ್ದರು. ಇದನ್ನು ಗಮನಿಸಿದ ಬ್ರಾಂಚ್ ಮ್ಯಾನೇಜರ್ ಖಾತೆಯಿಂದ ಹಲವು ಬಾರಿ ಹಣ ಡ್ರಾ ಆಗಿರುವ ಬಗ್ಗೆ ಹಾಗೂ ಈಗ ಚಿನ್ನವನ್ನು ಅಡವಿಟ್ಟು ಹಣ ಪಡೆಯುತ್ತಿರುವುದು ಇದೆಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಆದರೆ ವೃದ್ಧೆ ಸರಿಯಾಗಿ ಉತ್ತರಿಸಿಲ್ಲ. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಬ್ಯಾಂಕ್ಗೆ ಬಂದ ಸಿಸಿಬಿ ಸೈಬರ್ ಪೊಲೀಸರು, ಲಕ್ಷ್ಮೀ ಅವರನ್ನು ವಿಚಾರಿಸಿದ್ದಾರೆ. ಆದರೆ ಆರಂಭದಲ್ಲಿ ಏನನ್ನೂ ಅವರು ಬಾಯಿ ಬಿಟ್ಟಿರಲಿಲ್ಲ. ಹೀಗಾಗಿ ತಮ್ಮದೇ ಸ್ಟೈಲ್ನಲ್ಲಿ ಪೊಲೀಸರು ಕೇಳಿದಾಗ ಡಿಜಿಟಲ್ ಅರೆಸ್ಟ್ ಆಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೂಡಲೇ ಸಂತ್ರಸ್ತೆಯಿಂದ ದೂರು ಪಡೆದಿರುವ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪ್ರಕರಣ ಸಂಬಂಧ ತನಿಖೆಗಿಳಿದ ಖಾಕಿ ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗನ್ನು ಬಂಧಿಸಿದ್ದಾರೆ.
ಗೌರವ್ ಕುಮಾರ್ , ಓಂ ಪ್ರಕಾಶ್ ರಾಜ್ ಪುತ್ ಸೇರಿದಂತೆ ಐವರು ಬಂಧಿತ ಆರೋಪಿಗಳು. ಸುಲಿಗೆ ಮಾಡಿದ್ದ ಹಣವನ್ನು ಆರೋಪಿಗಳು ಒಟ್ಟು 22 ಖಾತೆಗಳಿಗೆ ವರ್ಗಾಯಿಸಿದ್ದು, 60 ಲಕ್ಷ ಹಣ ಇರುವ ಅಕೌಂಟ್ ನ್ನು ಪೊಲೀಸರು ಪ್ರೀಜ್ ಮಾಡಿದ್ದಾರೆ.

