ಬೆಂಗಳೂರು: ಜಗತ್ತಿನಲ್ಲಿ ಈಗ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು (Cardiovascular) ಹಾಗೂ ಮೂಳೆ ರೋಗಗಳಿಗಿಂತಲೂ ಭೀಕರವಾಗಿ ಮಾನಸಿಕ ಕಾಯಿಲೆಗಳು ಇಡೀ ಮಾನವ ಕುಲವನ್ನು ಕಾಡುತ್ತಿವೆ. ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಜಾಗತಿಕ ಆರೋಗ್ಯ ಮಾಪನ ಸಂಸ್ಥೆ (IHME) ಮತ್ತು ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯದ ಜಂಟಿ ಮಹಾ ಸಮೀಕ್ಷೆಯ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಬರೋಬ್ಬರಿ 120 ಕೋಟಿ (1.2 ಬಿಲಿಯನ್) ಜನ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ
ಇದು 1990 ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದ್ದು ಜಗತ್ತಿನಲ್ಲಿ ಜನರನ್ನು ಅತಿ ಹೆಚ್ಚು ಅಸಮರ್ಥರನ್ನಾಗಿ (Leading cause of disability) ಮಾಡುತ್ತಿರುವ ಕಾಯಿಲೆಗಳ ಪಟ್ಟಿಯಲ್ಲಿ ಮಾನಸಿಕ ಅಸ್ವಸ್ಥತೆ ಈಗ ಮೊದಲ ಸ್ಥಾನಕ್ಕೆ ಬಂದು ನಿಂತಿದೆ.
ಖಿನ್ನತೆ, ಆತಂಕ ಭಾರಿ ಏರಿಕೆ: 1990 ರಿಂದೀಚೆಗೆ ಜನರ ಮನಸ್ಸನ್ನು ಕಾಡುತ್ತಿರುವ ಆತಂಕದ ಅಸ್ವಸ್ಥತೆಗಳು (Anxiety) ಶೇ. 158 ರಷ್ಟು ಹಾಗೂ ಖಿನ್ನತೆಯು (Depression) ಶೇ. 131 ರಷ್ಟು ಭೀಕರವಾಗಿ ಹೆಚ್ಚಳವಾಗಿದೆ.
ಕೋವಿಡ್ ಕೊಟ್ಟ ಆಘಾತ: ಆನ್ಲೈನ್ ಲೋಕ, ಆರ್ಥಿಕ ಅಸ್ಥಿರತೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಂಟಿತನಕ್ಕೆ ಜಾರಿದ್ದೇ ಈ ಬಿಕ್ಕಟ್ಟು 2023 ರ ವೇಳೆಗೆ ಗರಿಷ್ಠ ಮಟ್ಟಕ್ಕೆ ತಲುಪಲು ಪ್ರಮುಖ ಕಾರಣ ಎಂದು ಸಂಶೋಧಕರು ಬೆರಳು ಮಾಡಿ ತೋರಿಸಿದ್ದಾರೆ.
ಮಹಿಳೆಯರು ವರ್ಸಸ್ ಪುರುಷರು: ಒಟ್ಟಾರೆ ಮಾನಸಿಕ ಅಸ್ವಸ್ಥತೆಗಳು ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬಂದಿವೆ. ಆದರೆ, ಆಟಿಸಂ (Autism), ಎಡಿಎಚ್ಡಿ (ADHD) ಮತ್ತು ವ್ಯಕ್ತಿತ್ವ ಅಸ್ವಸ್ಥತೆಗಳಂತಹ (Personality disorders) ಕೆಲವು ನಿರ್ದಿಷ್ಟ ಸಮಸ್ಯೆಗಳು ಪುರುಷರಲ್ಲಿ ಹೆಚ್ಚಾಗಿ ಪತ್ತೆಯಾಗಿವೆ.
ಯುವ ಪೀಳಿಗೆಗೆ ದೊಡ್ಡ ಗಂಡಾಂತರ:
ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಮಾನಸಿಕ ಅಸ್ವಸ್ಥತೆಯ ಮಹಾ ಹೊರೆ ಈಗ ಯುವ ಪೀಳಿಗೆಯತ್ತ ಶಿಫ್ಟ್ ಆಗಿದೆ. ಪ್ರಸ್ತುತ 15 ರಿಂದ 19 ವರ್ಷದೊಳಗಿನ ಹದಿಹರೆಯದವರೇ ಈ ಕಾಯಿಲೆಗಳಿಗೆ ಅತಿ ಹೆಚ್ಚು ಬಲಿಯಾಗುತ್ತಿದ್ದಾರೆ
ರೋಗಿಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದ್ದರೆ, ಅವರಿಗೆ ಕೌನ್ಸೆಲಿಂಗ್ (Therapy) ಮತ್ತು ವೈದ್ಯಕೀಯ ಆರೈಕೆ ನೀಡುವ ಆರೋಗ್ಯ ವ್ಯವಸ್ಥೆಗಳು ಮಾತ್ರ ಆ ವೇಗಕ್ಕೆ ತಕ್ಕಂತೆ ವಿಸ್ತರಣೆಯಾಗದೆ ಸಂಪೂರ್ಣ ಹಿಂದೆ ಬಿದ್ದಿವೆ.
ವಯಸ್ಸಿಗೆ ತಕ್ಕಂತೆ ಕಾಡುವ ಮಾನಸಿಕ ರೋಗಗಳು
ಬಾಲ್ಯಾವಸ್ಥೆ (ಮಕ್ಕಳಲ್ಲಿ): ಆಟಿಸಂ (Autism), ಎಡಿಎಚ್ಡಿ (ADHD), ನಡವಳಿಕೆ ಅಸ್ವಸ್ಥತೆ (Conduct disorder) ಮತ್ತು ಬುದ್ಧಿಮಾಂದ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚು ಬಾಧಿತರಾಗುತ್ತಾರೆ.
ಹದಿಹರೆಯ ಮತ್ತು ಯುವಾವಸ್ಥೆ: ತೀವ್ರ ಆತಂಕ (Anxiety) ಮತ್ತು ಮೇಜರ್ ಡಿಪ್ರೆಸಿವ್ ಡಿಸಾರ್ಡರ್ (MDD) ಅತ್ಯಂತ ಪ್ರಮುಖ ಚಾಲಕ ಶಕ್ತಿಯಾಗಿ ಕಾಡುತ್ತದೆ.
ಚಿಕಿತ್ಸೆ ಸಿಗುತ್ತಿಲ್ಲ: ಭಾರತ ಸೇರಿದಂತೆ ವಿಶ್ವದಾದ್ಯಂತ ಭಾರಿ ಕೊರತೆ
ಈ ವರದಿಯು ಜಗತ್ತಿನಾದ್ಯಂತ ಇರೋ ಚಿಕಿತ್ಸಾ ವ್ಯವಸ್ಥೆಯ ಅಸಲಿ ಮುಖವಾಡವನ್ನು ಬಯಲು ಮಾಡಿದೆ:
ಜಗತ್ತಿನಲ್ಲಿ ತೀವ್ರ ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಕೇವಲ ಶೇ. 9 ರಷ್ಟು ಜನರಿಗೆ ಮಾತ್ರ ಕನಿಷ್ಠ ಪ್ರಮಾಣದ ಚಿಕಿತ್ಸೆ ಸಿಗುತ್ತಿದೆ.
ಭಾರತ ಸೇರಿ ಜಗತ್ತಿನ 90 ದೇಶಗಳಲ್ಲಿ ಕೇವಲ ಶೇ. 5 ಕ್ಕಿಂತ ಕಡಿಮೆ ಜನರಿಗೆ ಮಾತ್ರ ಸೂಕ್ತ ಮಾನಸಿಕ ಚಿಕಿತ್ಸೆ ಲಭ್ಯವಾಗುತ್ತಿದೆ.
ಆಸ್ಟ್ರೇಲಿಯಾ, ಕೆನಡಾ ಮತ್ತು ನೆದರ್ಲ್ಯಾಂಡ್ಸ್ನಂತಹ ಕೆಲವು ಶ್ರೀಮಂತ ದೇಶಗಳಲ್ಲಿ ಮಾತ್ರ ಚಿಕಿತ್ಸಾ ವ್ಯಾಪ್ತಿಯು ಶೇ. 30 ರಷ್ಟ ದಾಟಿದೆ.

