HomeKarnatakaಕಲಬುರಗಿಯಲ್ಲಿ 'ಪಿಎಂ ಮಿತ್ರ ಜವಳಿ ಪಾರ್ಕ್' ನಿರ್ಮಾಣಕ್ಕೆ ಮತ್ತಷ್ಟು ವೇಗ

ಕಲಬುರಗಿಯಲ್ಲಿ ‘ಪಿಎಂ ಮಿತ್ರ ಜವಳಿ ಪಾರ್ಕ್’ ನಿರ್ಮಾಣಕ್ಕೆ ಮತ್ತಷ್ಟು ವೇಗ

ಬೆಂಗಳೂರು: ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮಹತ್ವಾಕಾಂಕ್ಷಿ ‘ಪಿಎಂ ಮಿತ್ರ ಜವಳಿ ಪಾರ್ಕ್’ ಯೋಜನೆಯ ಕಾಮಗಾರಿ ಕುರಿತು ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಮಾಡಿದ ಘೋಷಣೆಯನ್ನು ಕಾಲಮಿತಿಯಲ್ಲಿ ಜಾರಿಗೆ ತರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.‌

ಕಲಬುರಗಿ ಜವಳಿ ಪಾರ್ಕ್‌ನ ಬಾಹ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಒಳಗೊಂಡಂತೆ ಸಮಗ್ರ ಯೋಜನಾ ವರದಿಯನ್ನು ತಕ್ಷಣವೇ ಪರಿಷ್ಕರಿಸಿ, ಭಾರತ ಸರ್ಕಾರದ ಯೋಜನಾ ಅನುಮೋದನೆ ಸಮಿತಿಗೆ ಸಲ್ಲಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಗೆ ನಿರ್ದೇಶಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಪಾರ್ಕ್‌ನ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಸಭೆಯಲ್ಲಿ ಸೂಚಿಸಿದ್ದು, ಮೊದಲ ಹಂತದ ಯಶಸ್ವಿ ಅನುಷ್ಠಾನದ ನಂತರವಷ್ಟೇ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಪ್ರಮಾಣವನ್ನು ಆಧರಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೇಂದ್ರ ಸರ್ಕಾರದ ‘ಅಭಿವೃದ್ಧಿ ಬಂಡವಾಳ ಬೆಂಬಲ’ ಯೋಜನೆಯಡಿ ಒಟ್ಟು ಯೋಜನಾ ವೆಚ್ಚದ ಶೇ. 30 ರಷ್ಟು (ಗರಿಷ್ಠ ₹500 ಕೋಟಿ) ಅನುದಾನ ಲಭ್ಯವಾಗಲಿದ್ದು, ಇದನ್ನು ಎರಡು ಹಂತಗಳಲ್ಲಿ ಬಳಸಿಕೊಳ್ಳಲಾಗುವುದು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ಪಾರ್ಕ್‌ನ ಗೇಟ್‌ನಿಂದ ಹೊರಗಡೆ ನಡೆಯುವ ಬಾಹ್ಯ ಕಾಮಗಾರಿಗಳನ್ನು ಒಟ್ಟಾರೆ ಅನುದಾನದ ಅರ್ಹತೆಗಾಗಿ ಪರಿಗಣಿಸಬಹುದಾದರೂ, ಕೇಂದ್ರದ ನಿಜವಾದ ಧನಸಹಾಯವನ್ನು ಕೇವಲ ಪಾರ್ಕ್‌ನ ಒಳಗಿನ ಆಂತರಿಕ ಮೂಲಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮತ್ತು ವಸತಿ ನಿಲಯಗಳಿಗಾಗಿ ಬಳಸಲಾಗುವುದು.

ಕಲಬುರಗಿ ಜಿಲ್ಲೆಯ ಆರ್ಥಿಕ ಚಿತ್ರಣವನ್ನು ಬದಲಿಸಬಲ್ಲ ಹಾಗೂ ಸಾವಿರಾರು ಜನರಿಗೆ ಉದ್ಯೋಗ ನೀಡಬಲ್ಲ ಈ ಬೃಹತ್ ಜವಳಿ ಪಾರ್ಕ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಅನುವಾಗುವಂತೆ, ರಾಜ್ಯ ಅನುಷ್ಠಾನ ಸಂಸ್ಥೆಯು ಕನಿಷ್ಠ ₹25 ಕೋಟಿ ಹಣವನ್ನು ಭೌತಿಕ ಮೂಲಸೌಕರ್ಯಗಳಿಗಾಗಿ ವಿನಿಯೋಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ರಾಜ್ಯದ ಟೆಕ್ಸ್ ಟೈಲ್ಸ್ ಉದ್ಯಮಕ್ಕೆ ಹೊಸ ಆಯಾಮ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತವನ್ನು ಕೆಐಎಡಿಬಿ ಮೂಲಕ ಜಾರಿಗೊಳಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ ಯೋಜನೆಗೆ ಅಗತ್ಯವಾದ ಆಡಳಿತಾತ್ಮಕ ಅನುಮೋದನೆಗಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಹ ನಿರ್ಧರಿಸಲಾಯಿತು.

ಈ ಟೆಕ್ಸ್ ಟೈಲ್ಸ್ ಪಾರ್ಕ್ ಸ್ಥಾಪನೆಯಿಂದ ಕಲಬುರಗಿ ಭಾಗದಲ್ಲಿ ಭಾರಿ ಪ್ರಮಾಣದ ಹೂಡಿಕೆ, ಸಾವಿರಾರು ಉದ್ಯೋಗಾವಕಾಶಗಳು ಹಾಗೂ ಜವಳಿ ಕ್ಷೇತ್ರದಲ್ಲಿ ಸಮಗ್ರ ಕೈಗಾರಿಕಾ ಪರಿಸರ ನಿರ್ಮಾಣವಾಗಲಿದ್ದು, ಹೈದರಾಬಾದ್-ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular