ಕೊಡಗು: ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಸ್ವಯಂಪ್ರೇರಿತಕೇಸ್ ದಾಖಲಿಸಿಕೊಂಡಿದೆ.
ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಎ ಹಾಗೂ ಕುಶಾಲನಗರ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ರಕ್ಷಿತ್ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಪ್ರಕರಣ ದಾಖಲಿಸಿದ್ದಾರೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಮೇ 18ರಂದು ಎರಡು ಆನೆಗಳ ನಡುವೆ ನಡೆದ ಕಾದಾಟದ ವೇಳೆ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಜುನೇಷೆ ಎಸ್ ಮೃತಪಟ್ಟಿದ್ದರು. ಇದೇ ಘಟನೆ ವೇಳೆ ಮಾರ್ತಾಡ ಎಂಬ ಸಾಕಾನೆ ಕೂಡ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ, ದುರಂತಕ್ಕೆ ಅರಣ್ಯ ಅಧಿಕಾರಿಗಳ ವೈಫಲ್ಯ ಮತ್ತು ನಿರ್ಲಕ್ಷ್ಯವೇ ಕಾರಣಎಂದು ಅಭಿಪ್ರಾಯಪಟ್ಟಿದ್ದಾರೆ. ದುಬಾರೆ ಸಾಕಾನೆ ಶಿಬಿರದಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಪರಿಹರಿಸಬೇಕಿದೆ ಎಂದು ಅವರು ಸೂಚಿಸಿದ್ದಾರೆ.
ಈ ಘಟನೆ ಜೀವಿಸುವ ಹಕ್ಕಿಗೆ ಸಂಬಂಧಿಸಿದ ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಎಂದು ಉಲ್ಲೇಖಿಸಿದ್ದಾರೆ. ಜನರ ಸುರಕ್ಷತೆ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೂ ಪ್ರಸ್ತಾಪಿಸಿರುವ ಅವರು, ಜೂನ್ 24ರೊಳಗೆ ಸಂಬಂಧಿತ ಅರಣ್ಯ ಅಧಿಕಾರಿಗಳು ವೈಯಕ್ತಿಕವಾಗಿ ತಮ್ಮ ವಿವರಣೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.

