ಬೆಂಗಳೂರು: ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್ ನೀಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಮಗ್ರ ಶಿಶು ಯೋಜನೆಯಡಿ ಶಾಲಾಪೂರ್ವ ಶಿಕ್ಷಣ ಕಿಟ್ ಒದಗಿಸಲು ತೀರ್ಮಾನಿಸಲಾಗಿದೆ. 69,922 ಅಂಗನವಾಡಿ ಕೇಂದ್ರಗಳಿಗೆ ರೂ.3,000 ಘಟಕ ವೆಚ್ಚದಂತೆ ಒಟ್ಟು 20.98 ಕೋಟಿ ರೂ. ವೆಚ್ಚ ಮಾಡಿ ಶಾಲಾ ಪೂರ್ವ ಕಿಟ್ ಗಳನ್ನು ವಿತರಿಸಲಾಗುವುದು. ಶಾಲಾ ಪೂರ್ವ ಮಕ್ಕಳ ಅಭ್ಯಾಸಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿದೆ.
ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜು ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ನೂರು ಕೋಟಿ ರೂ ನೀಡಲಾಗುವುದು. ನೂರು ಕೋಟಿಯಲ್ಲಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಗೆ ನೀಡಿದೆ.
ಅದೇ ರೀತಿ ಮನೆ ಕೆಲಸ ಮಾಡುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದು, ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ, ಕಲ್ಯಾಣ ವಿಧೇಯಕಕ್ಕೆ ಇನ್ನು ಹೆಚ್ಚಿನ ವಿವರ ಬಯಸಿ ಮುಂದೂಡಲಾಗಿದೆ.

