ಬಳ್ಳಾರಿ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಮೇ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೋಕಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ 15ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಇದರಲ್ಲಿ ಪ್ರಮುಖವಾಗಿ ಸ್ಥಳೀಯ ಕಂಪನಿಗಳು ಸಹ ಪಾಲ್ಗೊಳ್ಳಲಿವೆ. ಕಂಪನಿಗಳು ತಮ್ಮಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ.
*ಅರ್ಹತೆ ಮತ್ತು ವಯೋಮಿತಿ
ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿರುವ 18 ರಿಂದ 40 ವರ್ಷ ವಯೋಮಿತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು.ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ವಿದ್ಯಾರ್ಹತೆಯ ಸ್ವ-ವಿವರಗಳ ಪ್ರತಿಯೊಂದಿಗೆ ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.7619207762, 7676774293, 9663263086, 6360408094 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ 4-ವಿಭಾಗ ಕಸ ವಿಂಗಡಣೆ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ದಂಡದ ಎಚ್ಚರಿಕೆ
ಬಳ್ಳಾರಿ,ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ಮೂಲದಲ್ಲಿಯೇ 4-ವಿಭಾಗಗಳ ಕಸದ ವಿಂಗಡಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
*ನಾಲ್ಕು ವಿಭಾಗಗಳ ಕಸ ವಿಂಗಡಣೆ ವಿವರ:*
ಎಲ್ಲಾ ಮನೆಗಳು, ವಾಣಿಜ್ಯ ಮಳಿಗೆಗಳು, ಸಂಸ್ಥೆಗಳು, ಮಾರುಕಟ್ಟೆಗಳು, ಬೃಹತ್ ತ್ಯಾಜ್ಯ ಉತ್ಪಾದಕರು, ಕಚೇರಿಗಳು, ಅಂಗಡಿ-ಹೋಟೆಲ್ಗಳು, ಬೀದಿ ಬದಿ ವ್ಯಾಪಾರಿಗಳು ಹಾಗೂ ಅಪಾರ್ಟ್ಮೆಂಟ್ಗಳು ಸೇರಿದಂತೆ ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರು ಕಸವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು.
ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.
*ಹಸಿ ತ್ಯಾಜ್ಯ (ಹಸಿರು ಡಬ್ಬಿ):* ಆಹಾರದ ಅವಶೇಷಗಳು, ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳು, ಬೇಯಿಸಿದ ಆಹಾರದ ತ್ಯಾಜ್ಯ ಮತ್ತು ತೋಟಗಾರಿಕೆ ಹಾಗೂ ಜೈವಿಕ ತ್ಯಾಜ್ಯಗಳು.
*ಒಣ ತ್ಯಾಜ್ಯ (ನೀಲಿ ಡಬ್ಬಿ):* ಕಾಗದ, ಕಾರ್ಡ್ ಬೋರ್ಡ್, ಪ್ಲಾಸ್ಟಿಕ್ ವಸ್ತುಗಳು, ಲೋಹ, ಗಾಜು ಹಾಗೂ ಇತರೆ ಮರುಬಳಕೆ ಯೋಗ್ಯ ತ್ಯಾಜ್ಯಗಳು.
*ಸ್ಯಾನಿಟರಿ ತ್ಯಾಜ್ಯ (ಕೆಂಪು ಡಬ್ಬಿ/ಚೀಲ):* ಸ್ಯಾನಿಟರಿ ಪ್ಯಾಡ್ಗಳು, ಡಯಾಪರ್ಗಳು, ಬ್ಯಾಂಡೆಜ್ ಮತ್ತು ಇತರೆ ಸ್ಯಾನಿಟರಿ ತ್ಯಾಜ್ಯಗಳು.
*ವಿಶೇಷ/ಗೃಹ ಅಪಾಯಕಾರಿ ತ್ಯಾಜ್ಯ (ಕಪ್ಪು ಡಬ್ಬಿ):* ಬ್ಯಾಟರಿಗಳು, ಬಲ್ಬ್ ಹಾಗೂ ಟ್ಯೂಬ್ ಲೈಟ್ಗಳು, ಅವಧಿ ಮೀರಿದ ಔಷಧಿಗಳು, ಬಣ್ಣದ ಡಬ್ಬಿಗಳು, ಇ-ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳು.
*ಪ್ರಮುಖ ಸೂಚನೆಗಳು
ಎಲ್ಲಾ ತ್ಯಾಜ್ಯ ಉತ್ಪಾದಕರು ಕಡ್ಡಾಯವಾಗಿ ವಿಂಗಡಿಸಿದ ತ್ಯಾಜ್ಯವನ್ನು ಮಾತ್ರ ಮನೆ ಮನೆ ಸಂಗ್ರಹಣಾ ಸಿಬ್ಬಂದಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಕಸವನ್ನು ಮಿಶ್ರಣ ಮಾಡುವಂತಿಲ್ಲ. ಎಲ್ಲಾ ವಾಣಿಜ್ಯ ಸಂಸ್ಥೆಗಳು ಮತ್ತು ಕಚೇರಿಗಳು ಕಸ ಸಂಗ್ರಹಣೆಗಾಗಿ ಪ್ರತ್ಯೇಕವಾಗಿ ನಾಲ್ಕು ವಿಭಾಗಗಳ ಡಬ್ಬಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.
ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿ ಮಾಡುವ ಘಟಕಗಳು ಎಸ್ಡಬ್ಲ್ಯೂಎಂ ನಿಯಮಗಳು, 2026ರ ಅನ್ವಯ ತಮ್ಮ ಸ್ಥಳದಲ್ಲಿಯೇ ಕಸ ಸಂಸ್ಕರಣಾ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸ್ವಚ್ಛತಾ ಸಿಬ್ಬಂದಿ ಹಾಗೂ ವಾಹನ ಚಾಲಕರು ಕೂಡ ಸಾರ್ವಜನಿಕರಿಂದ ವಿಂಗಡಿತ ತ್ಯಾಜ್ಯವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಿ ಸಾಗಿಸಬೇಕು.
ಈ ನಿಯಮಾವಳಿಗಳು ಏ.01 ರಿಂದ ಜಾರಿಯಲ್ಲಿದ್ದು, ಈ ಅಧಿಸೂಚನೆಯ ನಿಯಮಗಳನ್ನು ಮೀರಿ ಕಸ ವಿಂಗಡಣೆ ಮಾಡದ ಅಥವಾ ನಿಯಮ ಉಲ್ಲಂಘಿಸುವ ಯಾವುದೇ ವ್ಯಕ್ತಿ, ಮನೆ, ಸಂಸ್ಥೆ ಅಥವಾ ವಾಣಿಜ್ಯ ಘಟಕಗಳ ವಿರುದ್ಧ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2026 ಹಾಗೂ ಪುರಸಭೆಯ ಉಪನಿಯಮಗಳ ಅನ್ವಯ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ದಂಡ ವಿಧಿಸಲಾಗುವುದು. ಪುರಸಭೆಯ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

