ಕಲಬುರಗಿ: ಕೃಷಿ ಸಂಬಂಧಿತ ಕೋರ್ಸ್ ಗಳಿಗೆ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಎಸ್ಸಿ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಮತ್ತು ರೇಷ್ಮೆ ಕೋರ್ಸ್ ಗಳ ಪ್ರವೇಶಕ್ಕೆ ರೈತರ ಮಕ್ಕಳ ಕೋಟಾ ಸೀಟ್ ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ನಡೆದ ಅಕ್ರಮ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದ ಬಗ್ಗೆ ವರದಿಗಳಿದ್ದು, ಮರು ಪರೀಕ್ಷೆಗೆ ಒತ್ತಾಯ ಕೇಳಿ ಬಂದಿದೆ. ಮರು ಪರೀಕ್ಷೆ ಹಿರಿಯೂರು ಕೇಂದ್ರ ಒಂದರಲ್ಲಿ ಮಾತ್ರ ನಡೆಸಬೇಕೆ ಇಲ್ಲವೇ ರಾಜ್ಯಾದ್ಯಂತ ನಡೆಸಬೇಕೆ ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ಮಂಗಳವಾರ ನಿರ್ಧಾರ ಹೊರಬೀಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹಿರಿಯೂರು ಪರೀಕ್ಷಾ ಕೇಂದ್ರದ ಫಲಿತಾಂಶದ ಪ್ರಕಾರ ಪ್ರವೇಶಾತಿ ನಡೆದರೆ ರಾಜ್ಯದ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಲಿದೆ. ನ್ಯಾಯ ಒದಗಿಸಲು ಮರು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೆಇಎ ಸ್ಪಷ್ಟನೆ
ಮೇ 10ರಂದು ರಾಜ್ಯದ 17 ಕೇಂದ್ರಗಳಲ್ಲಿ ಕೃಷಿ ವಿಜ್ಞಾನ ಕೋರ್ಸ್ ಗಳ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿಲ್ಲವೆಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ. ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಗೆ ಸಂಬಂಧಪಟ್ಟ ಯಾವುದೇ ದೂರುಗಳಿದ್ದಲ್ಲಿ ಬೆಂಗಳೂರು ಕೃಷಿ ವಿವಿ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಹಿರಿಯೂರು ಪರೀಕ್ಷಾ ಕೇಂದ್ರದಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ 74 ವಿದ್ಯಾರ್ಥಿಗಳಿಗೆ 200 ಕ್ಕೆ 200 ಅಂಕಗಳು ಬಂದಿವೆ. ಅಕ್ರಮ ನಡೆದಿದೆ ಎಂದು ಕೆಲವು ಪೋಷಕರು ಆರೋಪಿಸಿದ್ದರು.

