ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೇ 20ಕ್ಕೆ 3 ವರ್ಷ ತುಂಬಲಿದ್ದು, ಈ ಸಂಭ್ರಮಾಚರಣೆಗೆ ಮೇ 19ರ ಇಂದು ತುಮಕೂರಿನಲ್ಲಿ ಸಾಧನಾ ಸಮಾವೇಶ ಯೋಚಿಸಲಾಗಿದೆ.
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಹಾಗೂ ನಾಯಕರು ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. 600 ಮಂದಿಗೆ ಅಂಗನವಾಡಿ ಉದ್ಯೋಗ ನೀಡಲಿದ್ದು, ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟು ಜನರಿಗೆ ಹಕ್ಕುಪತ್ರ ವಿತರಿಸುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರ ಪ್ರದಾನ ಮಾಡಲು ಇಂಗ್ಲೆಂಡ್ ನಿಂದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ತುಮಕೂರಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಮಾವೇಶದಲ್ಲಿ ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳು ಭಾಗವಹಿಸಲಿದ್ದಾರೆ. 1,52,492 ಮಂದಿಗೆ ಹಕ್ಕುಪತ್ರ ನೀಡಲಾಗುವುದು. ಇ-ಪೌತಿ ಆಂದೋಲನ, ದರಖಾಸ್ತು ಪೋಡಿ, ಕಂದಾಯ ಗ್ರಾಮ ಪತ್ರ, ಪೋಡಿ ಮುಕ್ತ ಅಭಿಯಾನಸೇರಿದಂತೆ 1,52,492 ಮಂದಿಗೆ ಹಕ್ಕು ಪತ್ರ, ಆದೇಶ ಪತ್ರಗಳನ್ನು ವಿತರಿಸಲಾಗುವುದು.

