ದಾವಣಗೆರೆ: ಬಾಲಕನ ಮೇಲೆ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ‘0’ ಎಫ್ ಐ ಆರ್, ಕೃತ್ಯ ನಡೆದ ಸ್ಥಳದ ವ್ಯಾಪ್ತಿ ಹಿನ್ನೆಲೆಯಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಕೇಸ್ ವರ್ಗಾಯಿಸಲಾಗಿದೆ. ತನಿಖೆ ಆರಂಭಿಸಿರುವ ಪೊಲೀಸರು ದೂರುದಾರರ ಹೇಳಿಕೆ ಪಡೆದುಕೊಂಡಿದ್ದಾರೆ.
ಮಠದ ವಸತಿ ನಿಲಯದಲ್ಲಿರುವ ಬಾಲಕನಿಂದ ಸ್ವಾಮೀಜಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಬಾಲಕನ ತಾಯಿ ಲಕ್ಷ್ಮೀಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ. ಸಂತ್ರಸ್ತ ಬಾಲಕನ ಹೇಳಿಕೆಯನ್ನು ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಫೀಠದ ಟ್ರಸ್ಟ್ ವಚನಾನಂದ ಸ್ವಾಮೀಜಿಯವರನ್ನು ಇತ್ತೀಚೆಗೆ ಪೀಠದಿಂದ ಪದಚ್ಯುತಗೊಳಿಸಿತ್ತು. ಮಠದಲ್ಲಿ ಸ್ವಾಮೀಜಿ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಹಾಗೂ ಮಕ್ಕಳ ಹೇಳಿಕೆಯನ್ನು ಪಡೆದು ಪರಿಶೀಲನೆ ನಡೆಸಿದೆ.

