ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ದಳಪತಿ ವಿಜಯ್ ಅವರ ನೂತನ ಸಚಿವ ಸಂಪುಟದಲ್ಲಿ ಯುವ ನಾಯಕಿಯೊಬ್ಬರ ಆಯ್ಕೆ ಈಗ ಭಾರೀ ಕುತೂಹಲ ಮೂಡಿಸಿದೆ. ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿರುವ ಕೀರ್ತನಾ ಅವರಿಗೆ ವಿಜಯ್ ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.
ಕೇವಲ 29 ವರ್ಷದ ಕೀರ್ತನಾ ಸಚಿವ ಸಂಪುಟ ಸೇರಿರುವುದು ಒಂದು ದಾಖಲೆಯಾಗಿದ್ದು, ಇವರು ಮೂಲತಃ ತೆಲುಗು ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ. ತಮಿಳುನಾಡಿನಲ್ಲಿ ಗಣನೀಯ ಸಂಖ್ಯೆಯಲ್ಲಿರುವ ತೆಲುಗು ಭಾಷಿಕರ ಪ್ರತಿನಿಧಿಯಾಗಿ ಇವರು ಮುನ್ನೆಲೆಗೆ ಬಂದಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಕೀರ್ತನಾ ಅವರು ವೃತ್ತಿಪರ ರಾಜಕೀಯ ತಂತ್ರಜ್ಞರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಟಿಡಿಪಿ ಮೈತ್ರಿಯ ನಂಟು ಕೀರ್ತನಾ ಅವರು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ (ಟಿಡಿಪಿ) ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ‘ಶೋಟೈಮ್ ಕನ್ಸಲ್ಟಿಂಗ್’ ಎಂಬ ಸಂಸ್ಥೆಯಲ್ಲಿ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಇವರು, ಡಿಜಿಟಲ್ ಪ್ರಚಾರ ತಂತ್ರಗಳನ್ನು ರೂಪಿಸುವಲ್ಲಿ ಪರಿಣತಿ ಹೊಂದಿದ್ದಾರೆ. ರಾಜಕೀಯದ ಹಿನ್ನೆಲೆ ಅರಿತಿದ್ದ ಇವರು ನೇರವಾಗಿ ಚುನಾವಣಾ ಕಣಕ್ಕಿಳಿದ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ, ಈಗ ಸಚಿವ ಸ್ಥಾನವನ್ನೂ ಅಲಂಕರಿಸಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ನೆರೆಯ ರಾಜ್ಯದ ನಂಟು ಹೊಂದಿರುವ ಮತ್ತು ಅತ್ಯಂತ ಚಿಕ್ಕ ವಯಸ್ಸಿನ ಮಹಿಳಾ ಶಾಸಕಿಯೊಬ್ಬರು ಸಚಿವರಾಗಿರುವುದು ಒಂದು ದೊಡ್ಡ ಬದಲಾವಣೆಯ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ. ನಟ ವಿಜಯ್ ಅವರ ಈ ನಿರ್ಧಾರವು ಸಂಪುಟದಲ್ಲಿ ಯುವಶಕ್ತಿ ಮತ್ತು ಕಾರ್ಯತಂತ್ರದ ಪರಿಣತಿ ಹೊಂದಿರುವವರಿಗೆ ಆದ್ಯತೆ ನೀಡಿರುವುದನ್ನು ತೋರಿಸುತ್ತದೆ.

