ಐಪಿಎಲ್ 2026ರ ಋತುವಿನಲ್ಲಿ ಕಂಡುಬಂದ ಸಾಲು ಸಾಲು ಶಿಸ್ತು ಉಲ್ಲಂಘನೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಎಲ್ಲಾ 10 ಫ್ರಾಂಚೈಸಿಗಳಿಗೆ ಕಠಿಣ ಮಾರ್ಗಸೂಚಿಗಳನ್ನು ಒಳಗೊಂಡ ಎಂಟು ಪುಟಗಳ ನೋಟಿಸ್ ಜಾರಿಗೆ ಮಾಡಿದೆ. ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ (Vaping) ಮಾಡಿದ್ದು ಮತ್ತು ಮ್ಯಾನೇಜರ್ ರೋಮಿ ಭಿಂದರ್ ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲೀಗ್‌ನ ಘನತೆ ಉಳಿಸಲು ಬಿಸಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ.
ಹನಿ ಟ್ರ್ಯಾಪ್ ಬಗ್ಗೆ ಗಂಭೀರ ಎಚ್ಚರಿಕೆ: ಆಟಗಾರರನ್ನು ಗುರಿಯಾಗಿಸಿಕೊಂಡು ನಡೆಯುವ ‘ಹನಿ ಟ್ರ್ಯಾಪ್’ ಜಾಲದ ಬಗ್ಗೆ ಬಿಸಿಸಿಐ ವಿಶೇಷ ಎಚ್ಚರಿಕೆ ನೀಡಿದೆ. ಅನೇಕ ಸಂದರ್ಭಗಳಲ್ಲಿ ಆಟಗಾರರು ತಮ್ಮ ಹೋಟೆಲ್ ರೂಮ್‌ಗಳಿಗೆ ತಂಡದ ಮ್ಯಾನೇಜರ್‌ಗೆ ತಿಳಿಸದೆ ಅಪರಿಚಿತರನ್ನು ಕರೆಸಿಕೊಳ್ಳುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ. ಇನ್ನು ಮುಂದೆ ಯಾವುದೇ ವ್ಯಕ್ತಿ ಆಟಗಾರರ ರೂಮ್‌ಗೆ ಪ್ರವೇಶಿಸಬೇಕಾದರೆ ಮ್ಯಾನೇಜರ್‌ನ ಲಿಖಿತ ಅನುಮತಿ ಕಡ್ಡಾಯ. ಅತಿಥಿಗಳನ್ನು ಕೇವಲ ಹೋಟೆಲ್ ಲಾಬಿಯಲ್ಲಿ ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗಿದೆ.
ಮಾಲೀಕರಿಗೂ ಹೊಸ ನಿಯಮ: ಪಂದ್ಯ ನಡೆಯುವ ಸಮಯದಲ್ಲಿ ಫ್ರಾಂಚೈಸಿ ಮಾಲೀಕರು ಆಟಗಾರರನ್ನು ಭೇಟಿಯಾಗುವುದು ಅಥವಾ ಅವರನ್ನು ಅಪ್ಪಿಕೊಳ್ಳುವುದನ್ನು ಬಿಸಿಸಿಐ ನಿಷೇಧಿಸಿದೆ. ಮಾಲೀಕರು ಡಗೌಟ್ ಅಥವಾ ಡ್ರೆಸ್ಸಿಂಗ್ ರೂಮ್‌ಗೆ ಅನಗತ್ಯವಾಗಿ ಪ್ರವೇಶಿಸುವಂತಿಲ್ಲ. ಇದು ಪಂದ್ಯದ ಏಕಾಗ್ರತೆ ಮತ್ತು ನಿಯಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೇಪಿಂಗ್ ಮತ್ತು ಇತರ ನಿಷೇಧಗಳು: ಡ್ರೆಸ್ಸಿಂಗ್ ರೂಮ್ ಅಥವಾ ಸ್ಟೇಡಿಯಂ ಆವರಣದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ (Vape) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಕೇವಲ ನಿಯಮದ ಉಲ್ಲಂಘನೆಯಲ್ಲದೆ, ಭಾರತೀಯ ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವೂ ಆಗಲಿದೆ ಎಂದು ಎಚ್ಚರಿಸಲಾಗಿದೆ. ಅಲ್ಲದೆ, ಆಟಗಾರರು ಹೋಟೆಲ್ ಬಿಟ್ಟು ಹೊರಗೆ ಹೋಗುವಾಗ ಭದ್ರತಾ ಅಧಿಕಾರಿಗಳಿಗೆ (SLO) ಮಾಹಿತಿ ನೀಡುವುದು ಮತ್ತು ಅನುಮತಿ ಪಡೆಯುವುದು ಈಗ ಕಡ್ಡಾಯವಾಗಿದೆ.
ನಿಯಮ ಮೀರಿದರೆ ಕಠಿಣ ಶಿಕ್ಷೆ: ಈ ಹೊಸ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಆಟಗಾರರು ಅಥವಾ ಫ್ರಾಂಚೈಸಿಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಗಂಭೀರ ಪ್ರಕರಣಗಳಲ್ಲಿ ಆಟಗಾರರನ್ನು ಐಪಿಎಲ್‌ನಿಂದ ಅಮಾನತುಗೊಳಿಸುವ ಅಥವಾ ಅನರ್ಹಗೊಳಿಸುವ ಅಧಿಕಾರವನ್ನೂ ಬಿಸಿಸಿಐ ಕಾಯ್ದಿರಿಸಿಕೊಂಡಿದೆ. 48 ಗಂಟೆಗಳ ಒಳಗೆ ಎಲ್ಲಾ ಆಟಗಾರರಿಗೆ ಈ ಬಗ್ಗೆ ಮಾಹಿತಿ ನೀಡಿ ಅವರಿಂದ ಲಿಖಿತ ಒಪ್ಪಿಗೆ ಪಡೆಯುವಂತೆ ತಂಡದ ಮ್ಯಾನೇಜರ್‌ಗಳಿಗೆ ಸೂಚಿಸಲಾಗಿದೆ.

