ನಿನ್ನೆ ( ಮೇ 4 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 47ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳ ಗೆಲುವನ್ನು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 229 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು.
ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುವುದರಿಂದ ಪಾರಾಗಿದೆ. ಹಾಗಿದ್ದರೆ ಮುಂಬೈ ಇಂಡಿಯನ್ಸ್ಗೆ ಈ ಗೆಲುವಿನ ನಂತರ ಪ್ಲೇಆಫ್ ಹಾದಿ ಇನ್ನೂ ಉಳಿದುಕೊಂಡಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಮುಂಬೈ ಇಂಡಿಯನ್ಸ್ ಈಗಾಗಲೇ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆದರೆ ಟಾಪ್ ಸ್ಥಾನಗಳ ಪಂದ್ಯಗಳು ಬಾಕಿ ಉಳಿದಿರುವುದರಿಂದ ಅವುಗಳ ಆಧಾರದ ಮೇಲೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಕ್ಕೆ ಸಣ್ಣ ಅವಕಾಶವಿದೆ ಹಾಗೂ ಅದು ಊಹೆಗಷ್ಟೇ ಸೀಮಿತ ಎನ್ನಬಹುದು.
ಸದ್ಯ ಒಟ್ಟು 10 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ಉಳಿದ ಎಲ್ಲ 4 ಪಂದ್ಯಗಳನ್ನು ಗೆದ್ದರೆ 14 ಅಂಕಗಳನ್ನು ಹೊಂದಲಿದೆ. ಇಷ್ಟು ಅಂಕ ಗಳಿಸಿದ ಮಾತ್ರಕ್ಕೆ ಮುಂಬೈ ಪ್ಲೇಆಫ್ ಪ್ರವೇಶಿಸಲಾರದು.
13 ಅಂಕಗಳನ್ನು ಹೊಂದಿರುವ ಪಂಜಾಬ್, ತಲಾ 12 ಅಂಕಗಳನ್ನು ಹೊಂದಿರುವ ಆರ್ಸಿಬಿ, ಹೈದರಾಬಾದ್, ರಾಜಸ್ಥಾನ್ ಹಾಗೂ ಗುಜರಾತ್ ಪೈಕಿ ಟಾಪ್ 3 ಮತ್ತು ಸ್ಥಾನಗಳನ್ನು ಪಡೆಯುವ ತಂಡಗಳು ಕೊನೆಯದಾಗಿ 14 ಅಂಕಗಳನ್ನೇ ಕಡ್ಡಾಯವಾಗಿ ಹೊಂದಬೇಕು. ಹೀಗೆ ಕೊನೆಯ ಸ್ಥಾನದ ಕಟ್ಆಫ್ ಅಂಕ 14 ಆಗಿ, ಮುಂಬೈ ತನ್ನೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಒಳ್ಳೆಯ ನೆಟ್ ರನ್ರೇಟ್ ಹೊಂದಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದರೆ ಮಾತ್ರ ಪ್ಲೇಆಫ್ ಪ್ರವೇಶ ಸಿಗಲಿದೆ. ಹೀಗೆ ನಡೆದರೆ ತಮ್ಮ ತಂಡ ಪ್ಲೇಆಫ್ ಪ್ರವೇಶ ತಲುಪಲಿದೆ ಎಂದು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದು, ಇತರೆ ತಂಡದ ಅಭಿಮಾನಿಗಳು ಇದು ಆಗುವ ಕೆಲಸವೇ ಎಂದು ನಕ್ಕು ಕಾಲೆಳೆದಿದ್ದಾರೆ.
ಈ ಮೇಲಿನ ತಂಡಗಳ ಪೈಕಿ ಯಾವುದಾದರೂ ನಾಲ್ಕು ತಂಡಗಳು ಇನ್ನೆರಡು ಪಂದ್ಯಗಳನ್ನು ಗೆದ್ದರೆ ಅಲ್ಲಿಗೆ ಮುಂಬೈ ಎಲ್ಲ ಪಂದ್ಯಗಳನ್ನು ಎಷ್ಟೇ ಅಂತರದಿಂದ ಗೆದ್ದರೂ ಪ್ಲೇಆಫ್ ಪ್ರವೇಶ ಅಸಾಧ್ಯ.

