ಎಸ್.ಎಸ್. ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್’ನ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರಕ್ಕೆ ಈಗ ನೀರಿನ ಬರೆ ಬಿದ್ದಿದೆ. ಹೈದರಾಬಾದ್ ನಗರದಲ್ಲಿ ತೀವ್ರ ಜಲಕ್ಷಾಮ ಎದುರಾಗಿರುವ ಹಿನ್ನೆಲೆಯಲ್ಲಿ, ಚಿತ್ರೀಕರಣಕ್ಕಾಗಿ ಬರೋಬ್ಬರಿ 15 ಲಕ್ಷ ಲೀಟರ್ ನೀರು ಪೂರೈಸಬೇಕೆಂಬ ಚಿತ್ರತಂಡದ ಮನವಿಯನ್ನು ಹೈದರಾಬಾದ್ ಜಲಮಂಡಳಿ (HMWS&SB) ನೇರವಾಗಿಯೇ ತಿರಸ್ಕರಿಸಿದೆ.
ನಗರದ ನಿವಾಸಿಗಳೇ ದಿನನಿತ್ಯದ ಬಳಕೆಗಾಗಿ ಟ್ಯಾಂಕರ್ ನೀರಿಗಾಗಿ ಪರದಾಡುತ್ತಿರುವಾಗ, ಕೇವಲ ಸಿನಿಮಾ ಚಿತ್ರೀಕರಣಕ್ಕಾಗಿ ಇಷ್ಟು ಬೃಹತ್ ಪ್ರಮಾಣದ ನೀರನ್ನು ಬಿಡುಗಡೆ ಮಾಡುವುದು ಅಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ನಿಗದಿತ ದಿನಾಂಕದಂದು ನಡೆಯಬೇಕಿದ್ದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕೆ ಈಗ ಅಡ್ಡಿಯಾಗುವ ಸಾಧ್ಯತೆ ಎದುರಾಗಿದೆ.
ಹೈದರಾಬಾದ್‌ನಲ್ಲಿ ಪ್ರಸ್ತುತ ತೀವ್ರ ನೀರಿನ ಅಭಾವವಿರುವ ಹಿನ್ನೆಲೆಯಲ್ಲಿ, ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಚಿತ್ರತಂಡದ ಮನವಿಯನ್ನು ಹೈದರಾಬಾದ್ ವಾಟರ್ ಬೋರ್ಡ್ (HMWS&SB) ತಿರಸ್ಕರಿಸಿದೆ.
ಏನಿದು ವಿವಾದ ?
ನೀರಿನ ಅವಶ್ಯಕತೆ: ‘ವಾರಣಾಸಿ’ ಸಿನಿಮಾದ ಚಿತ್ರೀಕರಣ ಪ್ರಸ್ತುತ ರಾಜೇಂದ್ರನಗರ ವ್ಯಾಪ್ತಿಯ ಗಗನ್‌ಪಹಾಡ್‌ನಲ್ಲಿ ನಡೆಯುತ್ತಿದೆ. ನೀರಿನಲ್ಲಿ ಚಿತ್ರೀಕರಿಸಬೇಕಾದ ಕೆಲವು ದೃಶ್ಯಗಳಿಗಾಗಿ ಚಿತ್ರತಂಡವು ವಿಶೇಷವಾಗಿ ಒಂದು ಕೆರೆಯನ್ನು ನಿರ್ಮಿಸಿದೆ.ಈ ಕೆರೆಯನ್ನು ತುಂಬಿಸಲು ಶ್ರೀ ದುರ್ಗಾ ಆರ್ಟ್ಸ್ ಪ್ರತಿನಿಧಿಗಳು ತಲಾ 10 ಸಾವಿರ ಲೀಟರ್ ಸಾಮರ್ಥ್ಯದ 150 ಟ್ಯಾಂಕರ್ನೀರು (ಒಟ್ಟು 15 ಲಕ್ಷ ಲೀಟರ್) ಬೇಕೆಂದು ಜಲಮಂಡಳಿಯನ್ನು ಕೋರಿದ್ದರು. ಸಾರಿಗೆ ವೆಚ್ಚವನ್ನೂ ತಾವೇ ಭರಿಸುವುದಾಗಿ ತಿಳಿಸಿದ್ದರು.ಈ ತಿಂಗಳ 18ರಂದು ಚಿತ್ರೀಕರಣ ನಡೆಯಬೇಕಿರುವ ಕಾರಣ, ಶುದ್ಧೀಕರಿಸಿದ ನೀರನ್ನು (Purified Water) ಪೂರೈಸುವಂತೆ ವಿನಂತಿಸಿದ್ದರು.
ಜಲಮಂಡಳಿಯ ಪ್ರತಿಕ್ರಿಯೆ
ಹೈದರಾಬಾದ್ ನಗರದಲ್ಲಿ ಪ್ರಸ್ತುತ ಜನರು ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅನೇಕ ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳು ಟ್ಯಾಂಕರ್ ನೀರನ್ನೇ ಅವಲಂಬಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಒಂದು ಸಿನಿಮಾ ಚಿತ್ರೀಕರಣಕ್ಕಾಗಿ ಇಷ್ಟು ದೊಡ್ಡ ಪ್ರಮಾಣದ ನೀರನ್ನು ಪೂರೈಸುವುದು ಅಸಾಧ್ಯ ಎಂದು ಜಲಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

