ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಮಹಿಳೆಯೊಬ್ಬಳು ಆಗ ತಾನೆ ಜನಿಸಿದ ನವಜಾತ ಶಿಶುವನ್ನು ಬಿಟ್ಟು ಹೋದ ಘಟನೆ ನಡೆದಿದೆ.
ಮಗುವಿನ ಅಳು ಕೇಳಿದ ಗ್ರಾಮಸ್ಥರು ಶಿಶುವನ್ನು ರಕ್ಷಿಸಿದ್ದಾರೆ. ನಂತರ ಮಗುವಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಹಾಲುಣಿಸಿದ್ದಾರೆ. ಆರೋಗ್ಯ ಸಹಾಯಕ ಕಾಳಪ್ಪ ಕುಂಬಾರ ಆಗಮಿಸಿ ಮಾಹಿತಿ ಪಡೆದು ವೈದ್ಯರಿಗೆ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರೆಡ್ಡಿ ಮಗುವನ್ನು ತಮ್ಮ ಸಿಬ್ಬಂದಿಯೊಂದಿಗೆ ಆಂಬುಲೆನ್ಸ್ ನಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿದ್ದಾರೆ. ನಂತರ ಆರೈಕೆಗಾಗಿ ಮಗುವನ್ನು ಕೊಪ್ಪಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

