ಬೆಂಗಳೂರು: ಪತಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗರ್ಭಿಣಿ ಪತ್ನಿಯನ್ನೇ ಬಿಎಂಟಿಸಿ ಅಧಿಕಾರಿಯೊಬ್ಬ ಮನೆಯಿಂದ ಹೊರ ಹಾಕಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ.
ಬಿಎಂಟಿಸಿ ಅಧಿಕಾರಿ ಜಗದೀಪ್, 6 ತಿಂಗಳ ಗರ್ಭಿಣಿ ಹೆಂಡತಿಯನ್ನು ಮನೆಯಿಂದ ಹೊರಹಾಕಿರುವ ದುರುಳ. ಆರೋಪಿ ಜಗದೀಪ್ ಬಿಎಂಟಿಸಿಯಲ್ಲಿ ಸೆಕ್ಯೂರಿಟಿ ಇನ್ ಚಾರ್ಜ್ ಆಗಿದ್ದಾರೆ. ಪತ್ನಿ ಶ್ವೇತಾ ಆರು ತಿಂಗಳ ಗರ್ಭಿಣಿ. ಮಗುವನ್ನು ತೆಗೆಸಿ ಬಿಡು ಎಂದು ಹೊಡೆದು ಬಡಿದು, ಹಿಂಸಿಸಿದ್ದೂ ಅಲ್ಲದೇ ಮನೆಯಿಂದಲೇ ಆಚೆ ಹಾಕಿದ್ದಾನೆ.
ಶ್ವೇತಾ ಮತ್ತು ಜಗದೀಪ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯನಗರದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಇಬ್ಬರೂ ವಾಸವಿದ್ದರು. ಬರಬರುತ್ತಾ ಪತಿ ಜಗದೀಪ್ ವರ್ತನೆಯಲ್ಲಿ ಬದಲಾವಣೆಯಾಗಿದೆ. ಇದನ್ನು ಗಮನಿಸಿದ ಪತ್ನಿ ಶ್ವೇತಾ ಅನುಮಾನಗೊಂಡು ಪತಿಯ ಮೊಬೈಲ್ ಪರಿಶೀಲಿಸಿದಾಗ ವಾಟ್ಸಪ್ ನಲ್ಲಿ ಬೇರೊಂದು ಮಹಿಳೆಯೊಂದಿಗೆ ಚಾಟಿಂಗ್, ಅಶ್ಲೀಲ ಸಂದೇಶ ರವಾನಿಸಿರುವುದು ಗೊತ್ತಾಗಿದೆ.
ಪತಿಯ ದುರ್ವರ್ತನೆಗೆ ಬೆಚ್ಚಿಬಿದ್ದ ಶ್ವೇತಾ, ಈ ಬಗ್ಗೆ ಪ್ರಶ್ನಿಸಿದ್ದಾಳೆ. ಇದಕ್ಕೆ ಶ್ವೇತಾಳ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆರು ತಿಂಗಳ ಗರ್ಭಿಣಿ ಎಂಬುದನ್ನೂ ನೋಡದೇ ಮಗುವನ್ನು ತೆಗೆಸಿಬಿಡು, ನೀನು ನನಗೆ ಬೇಡ ಎಂದು ಹಿಂಸಿಸಿದ್ದಾನೆ. ಕಿಂಚಿತ್ತೂ ಕರುಣೆ ಇಲ್ಲದೇ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಪತಿಯಿಂದ ಅನ್ಯಾಯಕ್ಕೊಳಗಾಗಿರುವ ಗರ್ಭಿಣಿ ಶ್ವೇತಾ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪತಿ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

