ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಸಮಾಧಿ ಬಗ್ಗೆ ನೀಡಿದ ಹೇಳಿಕೆ ಮತ್ತು ಪೋಸ್ಟ್ ಪ್ರಶ್ನಿಸಿ ತಮ್ಮ ಮನೆಗೆ ಮುತ್ತಿಗೆ ಹಾಕಿದವರ ವಿರುದ್ಧ ನಟ ಚೇತನ್ ಅಹಿಂಸಾ ಪೊಲೀಸರಿಗೆ ದೂರು ನೀಡಿದ್ದಾರೆ.
ಡಾ. ರಾಜ್ ಕುಮಾರ್ ಅವರ ಸ್ಮಾರಕ ಜಾಗದ ಕುರಿತಂತೆ ನಟ ಚೇತನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರ ಪೋಸ್ಟ್ ಪ್ರಶ್ನಿಸಿ ಕೆಲವರು ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಮನೆಗೆ ಮುತ್ತಿಗೆ ಹಾಕಿದವರ ವಿರುದ್ಧ ಚೇತನ್ ಅಹಿಂಸಾ ಶೇಷಾದ್ರಿಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾ.ರಾ. ಗೋವಿಂದು, ಶಿವರಾಮೇಗೌಡ, ಶಿವಕುಮಾರ ನಾಯಕ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದೆ. ಮನೆಗೆ ಮುತ್ತಿಗೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಸಾ.ರಾ. ಗೋವಿಂದು ಬೆದರಿಕೆ ಹಾಕಿ ಗೂಂಡಾಗಿರಿ ಮಾಡಿದ್ದು ದಾಖಲೆ ಸಹಿತ ದೂರು ನೀಡಿದ್ದೇನೆ ಎಂದು ಚೇತನ್ ಅಹಿಂಸಾ ತಿಳಿಸಿದ್ದಾರೆ.
ಡಾ. ರಾಜ್ ಕುಮಾರ್ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದರ ಬಗ್ಗೆ ಚೇತನ್ ಅಹಿಂಸಾ ಪ್ರಶ್ನಿಸಿದ್ದರು. ಅವರ ವಿರುದ್ಧ ರಾಜ್ ಕುಮಾರ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಅಭಿಮಾನಿಗಳು ಬಸವೇಶ್ವರನಗರ ಪೊಲೀಸ್ ಠಾಣೆಗೆ ಚೇತನ್ ಅಹಿಂಸಾ ವಿರುದ್ಧ ದೂರು ನೀಡಿದ್ದರು. ಸಾ.ರಾ. ಗೋವಿಂದು ಸೇರಿದಂತೆ ಹಲವರು ಚೇತನ್ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ನಂತರ ಚೇತನ್ ಕ್ಷಮೆ ಯಾಚಿಸಿದ್ದರು. ಮತ್ತೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು.

