ಬೆಂಗಳೂರು: ಕೇಂದ್ರ ಸರ್ಕಾರದ ಪ್ರಾಯೋಜಿತ ಹೈದರಾಬಾದ್- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಮತ್ತು ಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹೈದರಾಬಾದ್- ಬೆಂಗಳೂರು ಹೈಸ್ಪೀಡ್ ರೈಲು ಯೋಜನೆ 606 ಕಿಲೋಮೀಟರ್ ಉದ್ದದ ಕಾರಿಡಾರ್ ಆಗಿದ್ದು ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ 101 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ನಿಲುಗಡೆ ಇರುತ್ತದೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಯೋಜನೆಗೆ ಆಡಳಿತಾತ್ಮಕ ಅಂಗೀಕಾರವನ್ನು ಸಚಿವ ಸಂಪುಟ ಸಭೆ ನೀಡಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು -ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೂ ಅಂಗೀಕಾರ ನೀಡಲಾಗಿದೆ. ಈ ಯೋಜನೆಯಿಂದ ಕೋಲಾರ, ಬಂಗಾರಪೇಟೆ, ವೈಟ್ಫೀಲ್ಡ್, ಬೈಯಪ್ಪನಹಳ್ಳಿ ಭಾಗಗಳ ಜನರಿಗೆ ಚೆನ್ನೈ ಪ್ರಯಾಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಮೂರು ಮಹಾನಗರಗಳನ್ನು ಪ್ರಾದೇಶಿಕವಾಗಿ ಒಗ್ಗೂಡಿಸಿ ಆರ್ಥಿಕ ಬೆಳವಣಿಗೆಗೆ ಬೂಸ್ಟ್ ನೀಡುವುದು. ಪ್ರಯಾಣದ ಅವಧಿಯನ್ನು ಗಣನೀಯ ಮಟ್ಟದಲ್ಲಿ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗಳು ಇವಾಗಿವೆ ಎಂದು ತಿಳಿಸಿದ್ದಾರೆ.

