ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ 100 ರೋಸ್ಟರ್ ಬಿಂದುಗಳ ಬದಲಾಗಿ 400 ರೋಸ್ಟರ್ ಬಿಂದುಗಳನ್ನು ಪಾಲಿಸಲು, 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ 400 ಬಿಂದುಗಳ ರೋಸ್ಟರ್ ಅನ್ವಯ ತುರ್ತಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಏಪ್ರಿಲ್ 24ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯ ಬದಲಿಸಿ ಪರಿಷ್ಕೃತ ನಿರ್ಧಾರ ಕೈಗೊಳ್ಳಲಾಗಿದೆ. 100 ರೊಸ್ಟರ್ ಬಿಂದುಗಳ ಆಧಾರದ ಮೇಲೆ ಮೀಸಲಾತಿ ಹಾಗೂ ಒಳ ಮೀಸಲಾತಿ ಅನುಷ್ಠಾನ ಕಠಿಣವಾಗಲಿದೆ. ಹೀಗಾಗಿ ರೋಸ್ಟರ್ ಬಿಂದುಗಳನ್ನು 400 ವರ್ತುಲಗಳಾಗಿ ವಿಂಗಡಿಸಲಾಗಿದೆ. 2025ರ ಸೆಪ್ಟೆಂಬರ್ 3ರ ನಂತರದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

