ಧಾರವಾಡ: ಮಲಪ್ರಭಾ ಬಲದಂಡೆ ಕಾಲುವೆ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳಲು ಅವಕಾಶ: ಕೃಷಿ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಉದ್ದೇಶದಿಂದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಗೆ ಹಾಗೂ ನರಗುಂದ ಶಾಖಾ ಕಾಲುವೆಗೆ ಮೇ 1, 2026 ರಿಂದ ಮೇ 10, 2026 ರವರೆಗೆ ನೀರು ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಿಲುತೀರ್ಥ ಜಲಾಶಯದಿಂದ ಮೇ 01, 2026 ರಿಂದ ಮೇ 10, 2026 ರವರೆಗೆ ನೀರನ್ನು ಮಲಪ್ರಭಾ ಬಲದಂಡೆ ಕಾಲುವೆ ಹಾಗೂ ನರಗುಂದ ಶಾಖಾ ಕಾಲುವೆ ಮುಖಾಂತರ ಬಿಡುಗಡೆ ಮಾಡಲಾಗುತ್ತದೆ.
ಮಲಪ್ರಭಾ ಬಲದಂಡೆ ಕಾಲುವೆಗೆ ಹಾಗೂ ನರಗುಂದ ಶಾಖಾ ಕಾಲುವೆಯ ನೀರನ್ನು ಕೇವಲ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾರ್ವಜನಿಕರು, ರೈತರು ಸದರ ನೀರನ್ನು ಕೃಷಿ ಹಾಗೂ ಇನ್ನಿತರೆ ಬೇರೆ ಯಾವುದೇ ಉದ್ದೇಶಕ್ಕೆ ಪಂಪ್ ಸೆಟ್‍ನಿಂದ ಅಥವಾ ಇನ್ನಿತರ ಉಪಕರಣಗಳಿಂದ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾರಣ, ಎಲ್ಲ ಸಾರ್ವಜನಿಕರು, ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ನಿರ್ಬಂಧ ಉಲ್ಲಂಘಿಸಿ, ನೀರು ಬಿಡುಗಡೆ ಮಾಡಿರುವ ಉದ್ದೇಶ ಬಿಟ್ಟು ಬೇರೆ ಕಾರ್ಯಗಳಿಗೆ ಕಾಲುವೆ ನೀರನ್ನು ಬಳಸಿರುವುದು ಕಂಡುಬಂದಲ್ಲಿ ಅಂತಹ ಪಂಪ್ ಸೆಟ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಿಕೊಂಡು ನಿಯಮಾನುಸಾರ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

