ಬೆಂಗಳೂರು: ದೀರ್ಘಕಾಲದಿಂದ ಬಾಕಿ ಇದ್ದ ವೇತನ ಹಿಂಬಾಕಿ (Arrears) ಪಾವತಿಸುವಂತೆ ಒತ್ತಾಯಿಸುತ್ತಿದ್ದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಮೊದಲ ಹಂತವಾಗಿ 450 ಕೋಟಿರೂಪಾಯಿ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸತತ ಪ್ರತಿಭಟನೆ ಮತ್ತು ಸುದೀರ್ಘ ಕಾಯುವಿಕೆಯ ನಂತರ ರಾಜ್ಯದ ಸಾರಿಗೆ ನೌಕರರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ವೇತನ ಹಿಂಬಾಕಿ ಪಾವತಿಗೆ ರಾಜ್ಯ ಸರ್ಕಾರ 450 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಲಕ್ಷಾಂತರ ನೌಕರರ ಕುಟುಂಬಗಳಲ್ಲಿ ಆರ್ಥಿಕ ಸಮಾಧಾನ ಮೂಡಿದೆ. ಆದರೆ, ಪೂರ್ಣ ಪ್ರಮಾಣದ ಬಾಕಿ ಹಣಕ್ಕಾಗಿ ನೌಕರರ ಒತ್ತಾಯ ಇನ್ನೂ ಮುಂದುವರಿದಿದೆ.”
ಸಾರಿಗೆ ನೌಕರರಿಗೆ ಕಳೆದ 26 ತಿಂಗಳಿಂದ ಒಟ್ಟು 1,271.92 ಕೋಟಿ ರೂ. ವೇತನ ಹಿಂಬಾಕಿ ಪಾವತಿಸಬೇಕಿತ್ತು. ಪ್ರಸ್ತುತ ಲಭ್ಯವಿರುವ ಅನುದಾನದ ಆಧಾರದ ಮೇಲೆ ಮೊದಲ ಕಂತಾಗಿ 450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ನಿಗಮವಾರು ಹಂಚಿಕೆ:
- KSRTC: 143.85 ಕೋಟಿ ರೂ.
- BMTC: 137.24 ಕೋಟಿ ರೂ.
- NWKRTC (ವಾಯುವ್ಯ): 87.00 ಕೋಟಿ ರೂ.
- KKRTC (ಕಲ್ಯಾಣ ಕರ್ನಾಟಕ): 81.91 ಕೋಟಿ ರೂ.
ನೌಕರರ ಒಕ್ಕೂಟದ ಒತ್ತಾಯ: ಸರ್ಕಾರದ ಈ ನಡೆಯನ್ನು ನೌಕರರು ಸ್ವಾಗತಿಸಿದ್ದರೂ, ಬಾಕಿ ಇರುವ ಉಳಿದ ಸುಮಾರು 821.92 ಕೋಟಿರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಾರಿಗೆ ನೌಕರರ ಒಕ್ಕೂಟಗಳು ಒತ್ತಾಯಿಸಿವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.

