ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಬಿಡುಗಡೆಯ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಘೋಷಿಸಲಾಗಿದ್ದ ಜೂನ್ 4 ರಂದು ಸಿನಿಮಾ ತೆರೆಗೆ ಬರುತ್ತಿಲ್ಲ ಎಂದು ಸ್ವತಃ ಯಶ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ವಿಶ್ವಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿರುವ ಯಶ್, ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ. ಸಿನೆಮಾಕಾನ್‌ನಲ್ಲಿ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಬಿಡುಗಡೆ ಮಾಡಲು ಯಶ್ ಈ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು. ಒಬ್ಬ ನಟ ಮತ್ತು ನಿರ್ಮಾಪಕನಾಗಿ ತಮಗಿರುವ ಜವಾಬ್ದಾರಿಯನ್ನು ನೆನಪಿಸಿರುವ ರಾಕಿಂಗ್ ಸ್ಟಾರ್ ಯಶ್, ‘ಟಾಕ್ಸಿಕ್’ ಸಿನಿಮಾವನ್ನು ಪರಿಪೂರ್ಣವಾಗಿ ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಸಮಯ ಕೇಳಿದ್ದಾರೆ. ಜೂನ್ 4ರ ಬಿಡುಗಡೆಯಿಂದ ಹಿಂದೆ ಸರಿದಿರುವ ಯಶ್ ತಂಡದ ಮುಂದಿನ ನಡೆ ಏನು? ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಬಿಡುಗಡೆ ಮುಂದೂಡಿಕೆಗೆ ಕಾರಣವೇನು? ಸಿನಿಮಾ ಈಗಾಗಲೇ ಪೂರ್ಣಗೊಂಡಿದ್ದರೂ, ಅದನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸದೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಚಿತ್ರತಂಡ ಯೋಜಿಸುತ್ತಿದೆ. ಸಿನೆಮಾಕಾನ್‌ನಲ್ಲಿ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದ ಪ್ರೇರಿತರಾಗಿರುವ ಯಶ್ ಮತ್ತು ತಂಡ, ಜಾಗತಿಕ ವಿತರಣೆ (Global Distribution) ಮತ್ತು ಪಾಲುದಾರಿಕೆಗಾಗಿ ಬಿಡುಗಡೆಯನ್ನು ಮುಂದೂಡಿದ್ದಾರೆ.
ಯಶ್ ಹೇಳಿದ್ದೇನು? “ಭಾರತೀಯ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಬ್ಬ ನಟ ಮತ್ತು ನಿರ್ಮಾಪಕನಾಗಿ ನಮ್ಮ ಸಿನಿಮಾ ಪ್ರಪಂಚದಾದ್ಯಂತ ತಲುಪುವಂತೆ ಮಾಡುವುದು ನನ್ನ ಜವಾಬ್ದಾರಿ. ಇದಕ್ಕಾಗಿ ಸ್ವಲ್ಪ ಸಮಯದ ಅವಶ್ಯಕತೆಯಿದೆ. ನಿಮ್ಮ ತಾಳ್ಮೆ ಮತ್ತು ಬೆಂಬಲ ಹೀಗೆಯೇ ಇರಲಿ,” ಎಂದು ಯಶ್ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಹೊಸ ದಿನಾಂಕ ಯಾವಾಗ? ಸದ್ಯಕ್ಕೆ ಹೊಸ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಜಾಗತಿಕ ಮಟ್ಟದಲ್ಲಿ ಎಲ್ಲವೂ ಸಿದ್ಧವಾದ ನಂತರ ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬಂಡವಾಳ ಹೂಡಿವೆ. ಯಶ್ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಸಣ್ಣ ನಿರಾಸೆಯಾದರೂ, ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ ಎಂಬ ನಿರೀಕ್ಷೆ ದುಪ್ಪಟ್ಟಾಗಿದೆ.

