ನಿನ್ನೆ ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳ ಪ್ರಚಂಡ ಗೆಲುವನ್ನು ದಾಖಲಿಸಿ ಅಬ್ಬರಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 16.3 ಓವರ್ಗಳಲ್ಲಿ 75 ರನ್ಗೆ ಆಲ್ಔಟ್ ಆಗಿ ಆರ್ಸಿಬಿಗೆ 76 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತು.
ಇನ್ನು ಈ ಪಂದ್ಯದಲ್ಲಿ 2008ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿದ್ದ ಇಬ್ಬರು ಆಟಗಾರರು ಕಣಕ್ಕಿಳಿದಿದ್ದರು. ಆ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಜತೆಗೆ ಮತ್ತೋರ್ವ ಆಟಗಾರ ಅಂಪೈರ್ ಆಗಿ ಕಣದಲ್ಲಿದ್ದರು.
ಹೌದು, ನಿನ್ನೆಯ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಆಗಿದ್ದ ಅಜಿತೇಶ್ ಅಗ್ರಲ್ 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಅಂಡರ್ 19 ತಂಡದ ಪ್ರಮುಖ ಬೌಲರ್ ಆಗಿದ್ದರು. ಮಾರ್ಚ್ 2, 2008ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 160 ರನ್ಗಳ ಗುರಿ ನೀಡಿದ್ದ ಭಾರತ ಬೌಲರ್ಗಳು ತೋರಿದ ಅದ್ಭುತ ಪ್ರದರ್ಶನದಿಂದ 12 ರನ್ಗಳಿಂದ ಗೆದ್ದುಬೀಗಿತ್ತು. ಈ ಪಂದ್ಯದಲ್ಲಿ ನಿನ್ನೆ ಅಂಪೈರ್ ಆಗಿದ್ದ ಇದೇ ಅಜಿತೇಶ್ ಅಗ್ರಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಪೀಟರ್ ಮಲನ್ ಹಾಗೂ ಮೂರನೇ ಕ್ರಮಾಂಕದ ರಿಲೆ ರೊಸ್ಸೊ ಈ ಇಬ್ಬರನ್ನು ಔಟ್ ಮಾಡಿದ್ದರು. 5 ಓವರ್ ಬೌಲಿಂಗ್ ಮಾಡಿದ್ದ ಅಜಿತೇಶ್ 2 ಮೆಡನ್ ಓವರ್ ಸಹಿತ 7 ರನ್ ನೀಡಿ 1.40 ಎಕಾನಮಿಯಲ್ಲಿ ಎರಡು ವಿಕೆಟ್ ಪಡೆದು ಅಬ್ಬರಿಸಿದ್ದರು.

