ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದ ಘಟನೆಯು ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಪಘಾತಕ್ಕೀಡಾದ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆಂಬ್ಯುಲೆನ್ಸ್ನಲ್ಲಿದ್ದ ವಾಂತಿಯನ್ನು ಸ್ವಚ್ಛಗೊಳಿಸುವಂತೆ ಆತನ ಪತ್ನಿಗೆ ಸಿಬ್ಬಂದಿ ಒತ್ತಾಯಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ತೀವ್ರ ರಸ್ತೆ ಅಪಘಾತಕ್ಕೆ ಒಳಗಾಗಿದ್ದ 32 ವರ್ಷದ ರಾಹುಲ್ ಬರ್ಮನ್ ಎಂಬುವವರನ್ನು ಮಧ್ಯಪ್ರದೇಶದ ಕಟ್ನಿ ಜಿಲ್ಲಾ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿತ್ತು.ರೋಗಿಗೆ ತುರ್ತು ಚಿಕಿತ್ಸೆ ನೀಡುವ ಬದಲು, ಆಂಬ್ಯುಲೆನ್ಸ್ ತಂತ್ರಜ್ಞ ಮೋಹಿತ್ ನಾಯಕ್ ಎಂಬಾತ ಅಮಾನವೀಯವಾಗಿ ವರ್ತಿಸಿದ್ದಾನೆ. ಪ್ರಯಾಣದ ಸಮಯದಲ್ಲಿ ರೋಗಿ ವಾಂತಿ ಮಾಡಿಕೊಂಡಿದ್ದರಿಂದ, ಆಂಬ್ಯುಲೆನ್ಸ್ ಅನ್ನು ಸ್ವಚ್ಛಗೊಳಿಸುವಂತೆ ಆತನ ಪತ್ನಿಗೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾನವೀಯತೆ ತಲೆತಗ್ಗಿಸುವಂತಹ ಈ ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

