ಇಂದು ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಮಾಡಿತು. ಭುವನೇಶ್ವರ್ ಕುಮಾರ್ ಎಸೆದ ಎಸೆತಕ್ಕೆ ಸಹಿಲ್ ಪರಾಖ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕೆಎಲ್ ರಾಹುಲ್ 1 ರನ್, ಸಮೀರ್ ರಿಜ್ವಿ ಡಕ್‌ಔಟ್, ಟ್ರಿಸ್ಟನ್ ಸ್ಟಬ್ಸ್ 5, ಅಕ್ಷರ್ ಪಟೇಲ್ ಡಕ್‌ಔಟ್ ಹಾಗೂ ನಿತಿಶ್ ರಾಣಾ ಕೇವಲ 1 ರನ್ ಗಳಿಸಿ ಔಟ್ ಆದರು. ಈ ಮೂಲಕ ಕೇವಲ 8 ರನ್‌ಗೆ ಡೆಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಲ್ಲಿಗೆ ಎಲ್ಲರ ಚಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದ ಅತಿಕಡಿಮೆ ರನ್ ದಾಖಲೆ ಮೇಲೆ ನೆಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 49ರೊಳಗೆ ಕಟ್ಟಿಹಾಕಿ ಆರ್‌ಸಿಬಿ ತನ್ನ ಕೆಟ್ಟ ದಾಖಲೆಯನ್ನು ಅಳಿಸಿಹಾಕುತ್ತಾ ಎಂಬ ಕುತೂಹಲ ಮೂಡಿತ್ತು.
ಆದರೆ ಏಳನೇ ಜತೆಯಾದ ಡೇವಿಡ್ ಮಿಲ್ಲರ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಹಾಗೂ ಡೇವಿಡ್ ಮಿಲ್ಲರ್ 35 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 47ಕ್ಕೆ ತಂದರು. ಮಿಲ್ಲರ್ 19 ರನ್ ಗಳಿಸಿ ಔಟ್ ಆದರೆ ಬಳಿಕ ಒಂದಾದ ಪೊರೆಲ್ ಹಾಗೂ ಜೇಮಿಸನ್ ಜೋಡಿ ತಂಡದ ಮೊತ್ತವನ್ನು 49 ರನ್ ದಾಟಿಸಿ ಕೆಟ್ಟ ದಾಖಲೆಯಿಂದ ತಂಡವನ್ನು ಪಾರು ಮಾಡಿದರು.
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ 49 ರನ್ ದಾಟುತ್ತಿದ್ದಂತೆ ಆಸೆಯಿಂದ ಕಾಯುತ್ತಿದ್ದ ಆರ್‌ಸಿಬಿ ಫ್ಯಾನ್ಸ್ ಬೇಸರಕ್ಕೊಳಗಾದರೆ, ಆರ್‌ಸಿಬಿ ವಿರೋಧಿಗಳು ನಿಮ್ಮ 49 ರನ್ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಟ್ರೋಲ್ ಆರಂಭಿಸಿದ್ದಾರೆ.

