ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಫೋಟೋ ತೆಗೆದು ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮೆಟ್ರೋದಲ್ಲಿ ಮಹಿಳೆಯರ ಫ್ಟೋ, ವಿಡಿಯೋಗಳನ್ನು ಚಿತ್ರೀಕರಿಸಿ ಅಶ್ಲೀಲವಾಗಿ ಎಡಿಟ್ ಮಾಡಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್ಸ್ಟಾಗ್ರಾಮ್ನಲ್ಲಿ ದಿಗಂತ್ ಬಿ.ಕೆ ಎಂಬ ಆರೋಪಿ ಪೋಸ್ಟ್ ಮಾಡುತ್ತಿದ್ದ. ಆರೋಪಿಯನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದರು.
ತನ್ನ ವಿರುದ್ಧದ ಕೇಸ್ ರದ್ದುಗೊಳಿಸುವಂತೆ ಆರೋಪಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ, ಯಾವ ರೀತಿಯ ಮನುಷ್ಯರು ನೀವು ಎಂದು ಕಿಡಿಕಾರಿದೆ. ಅಲ್ಲದೇ ಆರೋಪಿ ಅರ್ಜಿ ವಜಾಗೊಳಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕುತ್ತೀರಾ, ಯಾವ ರೀತಿಯ ಮನುಷ್ಯರು ನೀವು? ಮೆಟ್ರೋದಲ್ಲಿ ಮಾತ್ರವಲ್ಲ, ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ, ನಿಮಗೆ ನಾಚಿಕೆಯಾಗಲ್ವಾ? ಎಂದು ಕೆಂದಕಾರಿದೆ.
ಅರ್ಜಿದಾರರ ಪರ ವಕೀಲ ಎಸ್ಆರ್ ಶ್ರೀಪ್ರಸಾದ್ ವಾದ ಮಂಡಿಸಿದ್ದು, ಮೆಟ್ರೋದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಇಲ್ಲಿ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ ಹೊರತು ಯಾವುದೇ ಸಂತ್ರಸ್ತ ಮಹಿಳೆಯರು ದೂರು ನೀಡಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇನ್ಸ್ಟಾಗ್ರಾಂನಲ್ಲಿ ‘ಮೆಟ್ರೊ ಚಿಕ್ಸ್ ರೀಲ್ಸ್’ ಎಂಬ ಪ್ರತ್ಯೇಕ ಪೇಜ್ ಸೃಷ್ಟಿಸಲಾಗಿದೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕೆಲವು ವಿಚಾರಗಳಲ್ಲಿ ತಾಂತ್ರಿಕತೆಗಿಂತ ನೈತಿಕತೆ ಮತ್ತು ಸುರಕ್ಷತೆ ಮುಖ್ಯ, ಆ ತಾಂತ್ರಿಕ ವಾದಗಳಿಗೆ ಬ್ರೇಕ್ ಹಾಕುವ ಸಮಯ ಬಂದಿದೆ ಎಂದು ಹೇಳಿದೆ.
ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ಅಶ್ಲೀಲವಾಗಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದು ಅಪರಾಧವಲ್ಲದೆ ಮತ್ತೇನು? ಎಂದು ಆರೋಪಿಯ ಅರ್ಜಿಯನ್ನು ವಜಾಗೊಳಿಸಿದೆ.
ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್ಸ್ಟಾಗ್ರಾಮ್ನಲ್ಲಿ ದಿಗಂತ್ ಬಿ.ಕೆ ಎಂಬಾತ ಪೋಸ್ಟ್ ಮಾಡುತ್ತಿದ್ದ. ಈ ಬಗ್ಗೆ ಬನಶಂಕರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. 14 ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು. 2025ರ ಮೇ ತಿಂಗಳಲ್ಲಿ ಬಿ.ಕೆ. ದಿಗಂತ್ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದರು.

