ಹರ್ದೋಯಿ\ಉತ್ತರಪ್ರದೇಶ: ಶಿಕ್ಷಣ ದೇಗುಲವೆನಿಸಬೇಕಾದ ಶಾಲೆಯಲ್ಲೇ ಅಸಹಾಯಕ ತಾಯಿಯೊಬ್ಬರ ಮೇಲೆ ಪ್ರಾಂಶುಪಾಲೆಯೊಬ್ಬರು ಕಿರುಚಾಡಿ, ನಿಂದಿಸಿರುವ ಆಘಾತಕಾರಿ ಘಟನೆ ಹರ್ದೋಯಿಯ ಸನ್ಬೀಮ್ ಶಾಲೆಯಲ್ಲಿ ನಡೆದಿದೆ.
ಯುಕೆಜಿ ವಿದ್ಯಾರ್ಥಿಯ ತಾಯಿ ನೀಲಂ ವರ್ಮಾ ಅವರು ಶಾಲೆಯ ಅಂಗಡಿಯ ಬದಲು ಹೊರಗಡೆ ಪುಸ್ತಕ ಖರೀದಿಸಿದ ಒಂದೇ ಕಾರಣಕ್ಕೆ, ಪ್ರಾಂಶುಪಾಲೆ ಮಮತಾ ಮಿಶ್ರಾ ಅವರು “ಬಾಯಿ ಮುಚ್ಚು, ಇಲ್ಲಿಂದ ತೊಲಗು” ಎಂದು ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಮಗುವಿನ ಹೆಸರನ್ನು ಶಾಲೆಯಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಖಾಸಗಿ ಶಾಲೆಗಳ ಈ ‘ಕಮಿಷನ್ ಮಾಫಿಯಾ’ ಮತ್ತು ಪೋಷಕರ ಮೇಲಿನ ದೌರ್ಜನ್ಯದ ಕರಾಳ ಮುಖ ಈಗ ಬಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹರ್ದೋಯಿಯ ಸನ್ಬೀಮ್ ಶಾಲೆಯಲ್ಲಿ, ಯುಕೆಜಿ (UKG) ವಿದ್ಯಾರ್ಥಿಯ ತಾಯಿ ನೀಲಂ ವರ್ಮಾ ಅವರ ಮೇಲೆ ಪ್ರಾಂಶುಪಾಲೆ ಮಮತಾ ಮಿಶ್ರಾ ಅವರು ಕಿರುಚಾಡಿ ನಿಂದಿಸಿದ್ದಾರೆ. “ಬಾಯಿ ಮುಚ್ಚು! ಇಲ್ಲಿಂದ ತೊಲಗು! ನಿನ್ನ ಮಗನ ಹೆಸರನ್ನು ಈಗಲೇ ರಿಜಿಸ್ಟರ್ನಿಂದ ತೆಗೆದುಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಆ ತಾಯಿ ಮಾಡಿದ ತಪ್ಪಿಷ್ಟೇ, ಶಾಲೆಯ ಅಂಗಡಿಯ ಬದಲಾಗಿ ಹೊರಗಡೆ ನೋಟ್ಬುಕ್ಗಳನ್ನು ಖರೀದಿಸಿದ್ದು!
ಇದು ಭಾರತದ ಖಾಸಗಿ ಶಾಲೆಗಳ “ಕಮಿಷನ್ ಮಾಫಿಯಾ”ದ ವಿಕೃತ ಮುಖವಾಗಿದೆ. ಕಮಿಷನ್ ಆಸೆಗಾಗಿ ಪೋಷಕರು ಹೆಚ್ಚಿನ ಬೆಲೆಯ ಪುಸ್ತಕಗಳು, ಸಮವಸ್ತ್ರ ಮತ್ತು ಸ್ಟೇಷನರಿಗಳನ್ನು ಶಾಲೆಯಲ್ಲೇ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಇಂತಹ ಕಿರುಕುಳವನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ.ಈ ಶೋಷಣೆ ಇಂದಿಗೇ ಕೊನೆಯಾಗಲಿ. ಇಂತಹವರನ್ನು ಬಹಿರಂಗವಾಗಿ ಖಂಡಿಸೋಣ ಮತ್ತು ವ್ಯವಸ್ಥೆಯಲ್ಲಿ ಸುಧಾರಣೆ ತರೋಣ. ಈ ವ್ಯವಸ್ಥೆ ಈಗಲೇ ಬದಲಾಗಬೇಕಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

