ರಾಮನಗರ: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ನಡೆದಿದೆ.
ರಾಮನಗರದ ಸಂಗಮ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಈ ವೇಳೆ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಒಂಟಿ ಸಲಗ ದಾಳಿ ನಡೆಸಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕರಿಗುಂಡ(55) ಮೃತ ದುರ್ದೈವಿ. ಸಂಗಮ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕರಿಗುಂಡ ಅವರ ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯ ನಾಗಪಟ್ಟಣ ಬಳಿ ಕಾಡಾನೆ ಮಹೇಶ್ ಎಂಬುವರಿಗೆ ಸೇರಿದ ಮೆಕ್ಕೆಜೋಳ ಬೆಳೆ ಹಾನಿ ಮಾಡಿದೆ.
ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ಗೆ ಅಂಟಿಕೊಂಡಂತಿರುವ ನಾಗಪಟ್ಟಣ ಗ್ರಾಮಕ್ಕೆ ನುಗ್ಗಿದ ಕಾಡಾನೆ ಮೆಕ್ಕೆಜೋಳ ಬೆಳೆಯನ್ನ ಸಂಪೂರ್ಣ ನಾಶ ಪಡಿಸಿದೆ.

