ಬೆಂಗಳೂರು: ವಿಕಲಚೇತನರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ವಿಕಲಚೇತನರ ಹಕ್ಕುಗಳ ಕಾಯಿದೆ-2016ರ ಅನ್ವಯ, ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ಮತ್ತು ವಸತಿ ಯೋಜನೆಗಳಲ್ಲಿ ವಿಕಲಚೇತನರಿಗೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.
ವಿಕಲಚೇತನರ ಹಕ್ಕುಗಳ ಕಾಯಿದೆ 2016ರ ಸೆಕ್ಷನ್-37ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ, ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ವಿಕಲಚೇತನರಿಗೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಲು ಆದೇಶಿಸಿದೆ.
ವಿಷಯ: ರಿಟ್ ಅರ್ಜಿ ಸಂಖ್ಯೆ: 43457/2015 (GM-RES) ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು 20.11.2025 ರಂದು ನೀಡಿರುವ ಆದೇಶದ ಕುರಿತು.
ಹಿನ್ನೆಲೆ: ಮಾನ್ಯ ಉಚ್ಚ ನ್ಯಾಯಾಲಯವು ವಿಕಲಚೇತನರ ಹಕ್ಕುಗಳ ಕಾಯಿದೆ, 2016ರ ಸೆಕ್ಷನ್-37ರ ಅಡಿಯಲ್ಲಿ ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸಲು ಮತ್ತು ಈ ಬಗ್ಗೆ ಅನುಷ್ಠಾನ ವರದಿಯನ್ನು ಸಲ್ಲಿಸಲು ಸೂಚಿಸಿತ್ತು.
ನ್ಯಾಯಾಲಯದ ಆದೇಶದ ಪ್ರಮುಖಾಂಶಗಳು:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.ವಿವಿಧ ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ನಡುವೆ ಸಮನ್ವಯದ ಅಗತ್ಯವಿದ್ದು, ಅದನ್ನು ಸರಿಪಡಿಸಲಾಗುತ್ತಿದೆ.ವಿಕಲಚೇತನರ ಹಕ್ಕುಗಳ ಕಾಯಿದೆಯ ಸೆಕ್ಷನ್ 37ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಸಂಬಂಧಪಟ್ಟ ಪಾಲುದಾರರಿಗೆ ಸೂಚನೆ ನೀಡುವಂತೆ ನ್ಯಾಯಾಲಯ ತಿಳಿಸಿದೆ.
ಸೆಕ್ಷನ್ 37ರ ಅಡಿಯಲ್ಲಿನ ಸೌಲಭ್ಯಗಳು:
ಈ ಕಾಯಿದೆಯ ಪ್ರಕಾರ, ಬೆಂಚ್ಮಾರ್ಕ್ ವಿಕಲಚೇತನ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರವು ಈ ಕೆಳಗಿನವುಗಳಲ್ಲಿ ಶೇ. 5ರಷ್ಟು ಮೀಸಲಾತಿ ನೀಡಬೇಕು:
- ಅ) ಕೃಷಿ ಭೂಮಿ ಹಂಚಿಕೆ ಮತ್ತು ವಸತಿ ಯೋಜನೆಗಳಲ್ಲಿ (ವಿಕಲಚೇತನ ಮಹಿಳೆಯರಿಗೆ ಆದ್ಯತೆ).
- ಆ) ಬಡತನ ನಿರ್ಮೂಲನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ.
- ಇ) ವಸತಿ, ಆಶ್ರಯ, ವ್ಯಾಪಾರ ಅಥವಾ ಉದ್ದಿಮೆ ಸ್ಥಾಪಿಸಲು ರಿಯಾಯಿತಿ ದರದಲ್ಲಿ ಭೂಮಿ ಹಂಚಿಕೆ ಮಾಡುವಲ್ಲಿ.
ಸರ್ಕಾರದ ಕ್ರಮ
ಈ ಕಾಯಿದೆಯನ್ನು ಜಾರಿಗೆ ತರಲು “ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮಗಳು1991” ಕ್ಕೆ ತಿದ್ದುಪಡಿ ತರಬೇಕಿದೆ. ಅದರಂತೆ, ನಿಯಮ 5ರಲ್ಲಿ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮತ್ತು ನಿಯಮ 13(2)ರಲ್ಲಿ ವಿವಿಧ ಪ್ರವರ್ಗಗಳಿಗೆ ನಿವೇಶನಗಳ ಮೀಸಲಾತಿಯನ್ನು ನಿಗದಿಪಡಿಸಿ ಸರ್ಕಾರವು ಈಗಾಗಲೇ ಅಧಿಸೂಚನೆ (ಸಂಖ್ಯೆ: ನಅಇ 552 ಮೈಅಪ್ರಾ 2025, ದಿನಾಂಕ: 18.04.2026) ಹೊರಡಿಸಿದೆ.



