ಡೆಹ್ರಾಡೂನ್: ಹಿಮಗಿರಿಗಳ ನಾಡು ಕೇದಾರನಾಥದಲ್ಲಿ ಸದ್ಯ ಭಕ್ತಿಯ ಅಲೆ ಎದ್ದಿದೆ. ಏಪ್ರಿಲ್ 22 ರಂದು ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರ ಸಾಗರವೇ ಹರಿದುಬಂದಿದೆ. ಮೊದಲ ದಿನವೇ ಬರೋಬ್ಬರಿ 38,000 ಜನರು ದರ್ಶನ ಪಡೆದು ದಾಖಲೆ ಬರೆದಿದ್ದಾರೆ. ಆದರೆ, ಈ ಪವಿತ್ರ ಯಾತ್ರೆಯ ಆರಂಭದ ನಡುವೆಯೇ ಮೈ ಜುಂ ಎನಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಬ್ಯಾರಿಕೇಡ್ ಜಿಗಿದು ಭಕ್ತರ ಕಾದಾಟ
Wellu ಎಂಬ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ಭಕ್ತರು ದೇವಸ್ಥಾನದ ಶಿಸ್ತನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಾಲಿನಲ್ಲಿ ನಿಂತು ದರ್ಶನ ಪಡೆಯುವ ಬದಲು, ಜನ ಬ್ಯಾರಿಕೇಡ್ಗಳನ್ನು ಜಿಗಿಯುತ್ತಿದ್ದಾರೆ. ಒಬ್ಬರನ್ನೊಬ್ಬರು ತಳ್ಳುತ್ತಾ, ನುಗ್ಗುತ್ತಿರುವ ದೃಶ್ಯಗಳನ್ನು ನೋಡಿದರೆ ಭಕ್ತಿಗಿಂತ ಹೆಚ್ಚಾಗಿ ಅಲ್ಲಿ ಅರಾಜಕತೆ ತುಂಬಿದಂತೆ ಕಾಣುತ್ತಿದೆ.
ನಾಗರಿಕ ಪ್ರಜ್ಞೆ ಎಲ್ಲಿ ಹೋಯಿತು? ನೆಟ್ಟಿಗರ ಆಕ್ರೋಶದ ಅಲೆ
ಈ ವಿಡಿಯೋ ಕಂಡು ಕೆಂಡಾಮಂಡಲವಾಗಿರುವ ನೆಟ್ಟಿಗರು ನಾಗರಿಕ ಪ್ರಜ್ಞೆ (Civic Sense) ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ:
ಪ್ರವಾಸಿ ತಾಣವಾಯಿತೇ ಪುಣ್ಯಕ್ಷೇತ್ರ?: ಜನರು ಶಾಂತಿ ಹುಡುಕಿಕೊಂಡು ಬರುತ್ತಿದ್ದ ಜಾಗವನ್ನು ಈಗ ಮಜಾ ಮಾಡುವ ಟೂರಿಸ್ಟ್ ಸ್ಪಾಟ್ ಮಾಡಿಕೊಂಡಿದ್ದಾರೆ. ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು ಮಜಾ ಮಾಡುವ ಜಾಗಗಳನ್ನಾಗಿ ಬದಲಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ತಾಳ್ಮೆ ಇಲ್ಲದ ಭಕ್ತರು: ನೂರಾರು ಕಿಲೋಮೀಟರ್ ನಡೆದು ಬರುವ ತಾಳ್ಮೆ ಇರುವವರಿಗೆ, ದರ್ಶನಕ್ಕಾಗಿ ಕೆಲವೇ ಮೀಟರ್ ಸಾಲಿನಲ್ಲಿ ನಿಲ್ಲಲು ಸಂಸ್ಕಾರವಿಲ್ಲವೇ? ಶಾಲೆಗಳಲ್ಲಿ ಶಿಸ್ತು ಕಲಿಸುವುದು ಈಗಿನ ಕಾಲಕ್ಕೆ ಅತಿ ಅಗತ್ಯ” ಎಂದು ಹಲವರು ಕಿಡಿಕಾರಿದ್ದಾರೆ.
ವಿಐಪಿ ಸಂಸ್ಕೃತಿಗೆ ಟೀಕೆ: ಸರ್ಕಾರ ದೇವಾಲಯಗಳನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಬೇಕು ಮತ್ತು ಅಪಾಯಕಾರಿ ‘ವಿಐಪಿ ಸಂಸ್ಕೃತಿ’ ನಿಲ್ಲಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಬಿಹಾರದ ದುರಂತ ಮರೆತರೆ ಹೇಗೆ?
ಕೇದಾರನಾಥದ ಈ ನೂಕುನುಗ್ಗಲು ಕಂಡು ಜನ ಇಷ್ಟೊಂದು ಭಯಪಡಲು ಒಂದು ಕಾರಣವಿದೆ. ಕಳೆದ ಮಾರ್ಚ್ 31, 2026 ರಂದು ಬಿಹಾರದ ಶೀತಲಾ ಮಾತಾ ದೇವಾಲಯದಲ್ಲಿ ನಡೆದ ಇಂತಹದ್ದೇ ಒಂದು ನೂಕುನುಗ್ಗಲಿನಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದರು. ಆ ಘೋರ ದುರಂತದ ಕಹಿ ನೆನಪು ಮಾಸುವ ಮುನ್ನವೇ ಕೇದಾರನಾಥದಲ್ಲಿ ಇಂತಹ ವರ್ತನೆ ಕಂಡುಬರುತ್ತಿರುವುದು ಆತಂಕಕಾರಿ.

