ತಿರುಚಿನಾಪಳ್ಳಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ತಿರುಚಿ ಪೂರ್ವ (Trichy East) ಮತಕ್ಷೇತ್ರದಲ್ಲಿ ಮಧ್ಯರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ಬೂತ್ ಅಧಿಕಾರಿಗಳಿಗೆ ಲಂಚ ನೀಡಿ ಡಿಎಂಕೆ (DMK) ಕಾರ್ಯಕರ್ತರು ಕಳ್ಳ ಮತಗಳನ್ನು ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಕಾರ್ಯಕರ್ತರು ಬೂತ್ಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ತಿರುಚಿ ಪೂರ್ವ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು 1:00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಡಿಎಂಕೆ ಸದಸ್ಯರು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಆಮಿಷ ಒಡ್ಡಿ, ಪೊಲೀಸರ ಬೆಂಬಲದೊಂದಿಗೆ ಮತಗಟ್ಟೆ ವಶಪಡಿಸಿಕೊಳ್ಳಲು (Booth Capturing) ಪ್ರಯತ್ನಿಸುತ್ತಿದ್ದಾರೆ ಎಂದು ಟಿವಿಕೆ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಈ ಅಕ್ರಮವನ್ನು ತಡೆಯಲು ಮುಂದಾದ ಟಿವಿಕೆ ಸದಸ್ಯರನ್ನು ಪೊಲೀಸರು ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ. “ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಆಡಳಿತ ಪಕ್ಷ ಅಕ್ರಮ ಎಸಗುತ್ತಿದೆ, ಇದಕ್ಕೆ ಪೊಲೀಸರೇ ಸಾಥ್ ನೀಡುತ್ತಿರುವುದು ದುರಂತ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಚುನಾವಣಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

