ನಿನ್ನೆ ( ಏಪ್ರಿಲ್ 23 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 104 ರನ್‌ಗೆ ಆಲ್‌ಔಟ್ ಆಯಿತು.
ಹೀಗೆ ಬೃಹತ್ ಸೋಲುಂಡ ಮುಂಬೈ ಈ ಟೂರ್ನಿಯಲ್ಲಿ ಐದನೇ ಪಂದ್ಯದಲ್ಲಿ ಸೋಲನ್ನು ಕಂಡಿದ್ದು, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಹೀಗೆ ಟೂರ್ನಿಯಲ್ಲಿ ಸಾಲು ಸಾಲು ಸೋಲು, ತವರು ನೆಲದಲ್ಲೇ ಹೀನಾಯ ಪ್ರದರ್ಶನ ನೀಡಿ ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಕಂಡು ಅಭಿಮಾನಿಗಳು ತೀರ ಬೇಸರ ಹೊರಹಾಕಿದ್ದು, ಎಲ್ಲೆಡೆ ನಾಯಕತ್ವದ ಬದಲಾವಣೆಯ ಕೂಗು ಕೇಳಿಬರುತ್ತಿದೆ.
ಇನ್ನು ನಿನ್ನೆಯ ಪಂದ್ಯ ಮುಗಿದ ಬಳಿಕವೂ ಈ ಕುರಿತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಚೆನ್ನೈ ವಿರುದ್ಧ ಹೀನಾಯ ಸೋಲು ಕಂಡರೂ ತಲೆ ಕೆಡಿಸಿಕೊಳ್ಳದ ಪಾಂಡ್ಯ ಗರ್ಲ್‌ಫ್ರೆಂಡ್ ಕೇರ್ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡು ನೆಟ್ಟಿಗರು ಟೀಕಿಸಿದ್ದಾರೆ.
ಇದೇ ಫೋಟೊದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ದೀಪಕ್ ಚಹರ್ ಪತ್ನಿಯರು ಪಂದ್ಯ ಸೋತ ಬೇಸರದಲ್ಲಿ ಸಪ್ಪೆ ಮುಖ ಹೊತ್ತು ಕುಳಿತಿದ್ದರೆ ಅವರ ಹಿಂದೆ ಇದ್ದ ಮಹೀಕಾ ಪಾಂಡ್ಯ ಜತೆ ಕೈಸನ್ನೆಯಲ್ಲೇ ಮಾತನಾಡಿದ್ದಾರೆ.

