ಪ್ರಮುಖ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ನಿರೀಕ್ಷಿತ ಮಟ್ಟದ ಸಾಧನೆ ಮಾಡಿದ್ದು, ಉತ್ತಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಕಳೆದ ಹಣಕಾಸು ವರ್ಷ 2025-26ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ. 20.8 ರಷ್ಟು ಪ್ರಗತಿಯೊಂದಿಗೆ ರೂ. 8,501 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ತಿಳಿಸಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ಲಾಭ ರೂ. 7,033 ಕೋಟಿಯಾಗಿತ್ತು. ಈ ಬಾರಿ ಲಾಭದಲ್ಲಿ ಸುಮಾರು ಶೇ. 21 ರಷ್ಟು ಏರಿಕೆಯಾಗಿದೆ. ಈ ಸಂದರ್ಭದಲ್ಲಿ ತನ್ನ ಶೇರುದಾರರ ಜೊತೆಗೆ ಐಟಿ ಉದ್ಯೋಗಾಕಾಂಕ್ಷಿಗಳಿಗೂ ಇನ್ಫೋಸಿಸ್ ಶುಭ ಸುದ್ದಿ ನೀಡಿದೆ.
ಮಾರ್ಚ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಚಟುವಟಿಕೆಗಳ ಮೂಲಕ ಬಂದ ಆದಾಯವು ಶೇ. 13.4 ರಷ್ಟು ಏರಿಕೆಯಾಗಿ ರೂ. 46,402 ಕೋಟಿಗೆ ತಲುಪಿದೆ ಎಂದು ಕಂಪನಿ ತನ್ನ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಇನ್ನು ಇಡೀ ಹಣಕಾಸು ವರ್ಷ 2025-26ಕ್ಕೆ ಇನ್ಫೋಸಿಸ್ನ ಒಟ್ಟು ನಿವ್ವಳ ಲಾಭ ಶೇ. 10.20 ರಷ್ಟು ಹೆಚ್ಚಾಗಿದ್ದು, ರೂ. 29,440 ಕೋಟಿ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯವು ಶೇ. 1.5 ರಿಂದ ಶೇ. 3.5 ರಷ್ಟು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.
ಆದಾಯದಲ್ಲಿ ಗಣನೀಯ ಏರಿಕೆ
20 ಸಾವಿರ ಫ್ರೆಶರ್ಗಳಿಗೆ ಅವಕಾಶ
ಐಟಿ ಉದ್ಯೋಗಾಕಾಂಕ್ಷಿಗಳಿಗೆ ಅತಿದೊಡ್ಡ ಸಿಹಿ ಸುದ್ದಿ ಎಂದರೆ, ಪ್ರಸಕ್ತ ಹಣಕಾಸು ವರ್ಷ 2026-27ರಲ್ಲಿ 20,000 ಫ್ರೆಶರ್ಗಳನ್ನು ನೇಮಿಸಿಕೊಳ್ಳುವುದಾಗಿ ಇನ್ಫೋಸಿಸ್ ಘೋಷಿಸಿದೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (CFO) ಜಯೇಶ್ ಸಂಘರಾಜ್ಕಾ ಈ ವಿಷಯವನ್ನು ತಿಳಿಸಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಇನ್ಫೋಸಿಸ್ನಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 3,28,594 ಆಗಿದೆ.
ರೂ. 25 ಲಾಭಾಂಶ (Dividend) ಘೋಷಣೆ
ತನ್ನ ಶೇರುದಾರರಿಗೆ ಇನ್ಫೋಸಿಸ್ ಬಂಪರ್ ಉಡುಗೊರೆ ನೀಡಿದೆ. ಪ್ರತಿ ಶೇರಿಗೆ ರೂ. 25 ರಂತೆ ಅಂತಿಮ ಲಾಭಾಂಶ ನೀಡುವುದಾಗಿ ಘೋಷಿಸಿದೆ. ಜೂನ್ 25, 2026 ರಂದು ಅರ್ಹ ಶೇರುದಾರರ ಖಾತೆಗಳಿಗೆ ಹಣ ಜಮೆಯಾಗಲಿದೆ. ಇನ್ಫೋಸಿಸ್ನ ಈ ಪ್ರಕಟಣೆಯು ಐಟಿ ಉದ್ಯೋಗಿಗಳ ವಜಾ ಸುದ್ದಿಗಳ ನಡುವೆ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

