ಬೆಂಗಳೂರು: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಹಾಗೂ ವಿವಿಧ ಪಾಲಿಕೆಗಳ ಆಯುಕ್ತರ ಹೆಸರಲ್ಲಿ ವಂಚನೆ ಯತ್ನ ನಡೆದಿದ್ದು, ಐದು ಕೇಸ್ ದಾಖಲಾಗಿವೆ.
ಅಧಿಕಾರಿಗಳ ಹೆಸರಲ್ಲಿ ವಾಟ್ಸಾಪ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟು ವಂಚನೆಗೆ ಯತ್ನಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ. ಕಳೆದ ಕೆಲವು ದಿನಗಳಿಂದ ಆಯುಕ್ತರು ಮತ್ತು ನಗರ ಪಾಲಿಕೆಗಳ ಆಯುಕ್ತರ ಭಾವಚಿತ್ರ ಇರುವ ವಾಟ್ಸಾಪ್ ಖಾತೆಗಳ ಮೂಲಕ ಪಾಲಿಕೆಯ ಬೇರೆ ಬೇರೆ ವಿಭಾಗಗಳ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಸಂದೇಶ ಕಳುಹಿಸಿ ಆರ್ಥಿಕ ಸಹಾಯ ಕೇಳುತ್ತಿದ್ದಾರೆ.
ಮುಖ್ಯ ಆಯುಕ್ತರ ಹೆಸರಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಂಡಳಿಯ ಅಧಿಕಾರಿಯೊಬ್ಬರಿಗೆ ಸಂದೇಶ ಕಳುಹಿಸಿದ್ದು, ಇದು ನನ್ನ ಖಾಸಗಿ ನಂಬರ್ ಆಗಿದ್ದು ಸೇವ್ ಮಾಡಿಕೊಳ್ಳಿ, ಯಾರಿಗೂ ಶೇರ್ ಮಾಡಬೇಡಿ, ಗೋವಿಂದರಾಜು ಕಚೇರಿಯಲ್ಲಿದ್ದಾರೆಯೇ ಎನ್ನುವ ಸಂದೇಶ ಕಳುಹಿಸಿದ್ದರು. ಈ ರೀತಿ ಸಂದೇಶ ಕಳುಹಿಸುವ ವಂಚಕರು ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೇ ರೀತಿ ಬೇರೆ ಬೇರೆ ಪಾಲಿಕೆಗಳ ಹೆಸರಲ್ಲಿ ವಂಚನೆಗೆ ಯತ್ನ ನಡೆದಿದ್ದು, ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ಜಿಬಿಎ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅನಧಿಕೃತ ಸಂಖ್ಯೆಗಳಿಂದ ಸಂದೇಶ ಬಂದಲ್ಲಿ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸುವಂತೆ ತಿಳಿಸಲಾಗಿದೆ.

