ಬೆಂಗಳೂರು: ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಡೇವಿಡ್(35), ಸುಮಿತ್ರಾ(30) ಮೃತಪಟ್ಟವರು. ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಈ ಸಂಬಂಧ ಕೊಲೆ ಮತ್ತು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಘಟನೆ ಯಾವಾಗ ನಡೆದಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲವಾಗಿದೆ. ಬುಧವಾರ ಮಧ್ಯಾಹ್ನ ಸ್ಥಳೀಯರ ಮಾಹಿತಿ ಅನ್ವಯ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಡೇವಿಡ್ ಮತ್ತು ಸುಮಿತ್ರಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಡೇವಿಡ್ ಚಾಲಕನಾಗಿದ್ದು, ಸುಮಿತ್ರಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರ್.ಟಿ. ನಗರದ ಗಂಗೇನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಾಗಿದ್ದರು.
ಆಗಾಗ ದಂಪತಿಯ ನಡುವೆ ಜಗಳವಾಗುತ್ತಿತ್ತು. ಮಂಗಳವಾರ ರಾತ್ರಿ ಕೂಡ ಇದೇ ರೀತಿ ಜಗಳವಾಗಿದೆ. ಗಲಾಟೆ ವಿಚಾರ ತಿಳಿದ ಸುಮಿತ್ರಾ ಸಹೋದರ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ದಂಪತಿಯ ನಡುವೆ ಮತ್ತೆ ಗಲಾಟೆ ಆಗಿದ್ದು, ಆಕ್ರೋಶದಿಂದ ಡೇವಿಡ್ ಪತ್ನಿಯನ್ನು ಕೊಲೆ ಮಾಡಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸ್ಥಳಕ್ಕೆ ಆರ್.ಟಿ. ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

