ಬೆಂಗಳೂರು: ಮದುವೆಯೇ ಬೇಡ ಎಂದು ಹೇಳುತ್ತಿದ್ದರೂ ತಂದೆ ಬಲವಂತವಾಗಿ ಮದುವೆಗೆ ಸಿದ್ಧತೆ ನಡೆಸುತ್ತಿದ್ದು, ಮದುವೆ ನಿರಾಕರಿಸಿದ್ದಕ್ಕೆ ಮರ್ಯಾದಾ ಹತ್ಯೆ ಭೀತಿಯಲ್ಲಿ ಯುವತಿಯೊಬ್ಬಳು ರಕ್ಷಣೆಗಾಗಿ ಹೈಕೋರ್ಟ್ ಮೊರೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಟ್‌ಫೀಲ್ಡ್ ವ್ಯಾಪ್ತಿಯ ಕಾಜಲ್ ರಾಜಪುರೋಹಿತ್ ಹೈಕೋರ್ಟ್ ಮೆಟ್ಟಿಲೇರಿರುವ ಯುವತಿ. ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.
ಉದ್ಯೋಗದಲ್ಲಿರುವ ಯುವತಿ ಕಾಜಲ್ ರಾಜಪುರೋಹಿತ್ ಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಸ್ವತಂತ್ರವಾಗಿ ಬದುಕಬೇಕು ಎಂಬ ಮಹದಾಸೆ. ಮದುವೆ ಬಗ್ಗೆ ಸ್ವಲ್ಪವೂ ಆಸಕ್ತಿ ಇಲ್ಲ. ಆದರೆ ಕಾಜಲ್ ತಂದೆ ಅಶೋಕ್ ಮಗಳಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದೂ ಅಲ್ಲದೇ ಬಲವಂತವಾಗಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ಕಾಜಲ್ ತನಗೆ ಮದುವೆ ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ಮದುವೆ ನಿರಾಕರಿಸಿದ್ದಾಳೆ. ಇಷ್ಟಾಗ್ಯೂ ತಂದೆ ತಮ್ಮ ಹಠ ಬಿಡದೇ ಮಗಳ ವಿವಾಹಕ್ಕೆ ತಯಾರಿ ನಡೆಸಿದ್ದಾರಂತೆ. ತನ್ನ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮದುವೆಗೆ ಸಿದ್ಧತೆ ನಡೆಸಿರುವುದರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕದಲ್ಲಿರುವ ಯುವತಿ, ತನಗೆ ರಕ್ಷಣೆ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾಳೆ.
ಕಾಜಲ್ ಹೇಳುವ ಪ್ರಕಾರ ತನ್ನ ಅಕ್ಕನಿಗೂ ಹೀಗೆ ಬಲವಂತದಿಂದ ತಂದೆ ಮದುವೆ ಮಾಡಿದ್ದಾರೆ. ಈಗ ತನಗೂ ಹಾಗೇ ಮಾಡಲು ಹೊರಟಿದ್ದು, ತನಗೆ ಮದುವೆ ಇಷ್ಟವಿಲ್ಲ ಎಂದು ಯುವತಿ ತಿಳಿಸಿದ್ದಾಳೆ.
ತನ್ನ ಕಾಲ ಮೇಲೆ ನಿಂತು ತಾನು ಜೀವನದಲ್ಲಿ ಸಾಧಿಸಬೇಕು ಆದರೆ ನನಗೆ ಒಪ್ಪಿಗೆ ಇಲ್ಲದಿದ್ದರೂ ತಂದೆ ಅಶೋಕ್ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿದ್ದಾರೆ. ತಂದೆಯ ಈ ನಿರ್ಧಾರದಿಂದ ತನಗೆ ರಕ್ಷಣೆ ನೀಡಿ ಎಂದು ಯುವತಿ ಮನವಿ ಮಾಡಿದ್ದಾಳೆ.
ಯುವತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಕಾಜಲ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿದೆ. ಮದುವೆಯಾಗಬೇಕು ಎಂದು ಒತ್ತಾಯಿಸುತ್ತಿರುವ ತಂದೆಯಿಂದ ತನಗೆ ಜೀವಭಯವಿದೆ ಎಂದು ಯುವತಿ ಆರೋಪಿಸಿದ್ದು, ಈ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿದೆ.

