ಸೂರ್ಯನ ಪ್ರತಾಪ ಹೆಚ್ಚಾಗಿದ್ದು, ಬಿಸಿಲ ಬೇಗೆಗೆ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಈ ಸುಡುವ ಬಿಸಿಲು ತಿರುಮಲ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರಿಗೆ ತಟ್ಟದಂತೆ ಮಾಡಲು ತಿರುಮಲ ತಿರುಪತಿ ದೇವಸ್ಥಾನ (TTD) ಪಕ್ಕಾ ಯೋಜನೆಯೊಂದಿಗೆ ಸಜ್ಜಾಗಿದೆ. ಭಕ್ತರ ಅನುಕೂಲಕ್ಕಾಗಿ ಸುಮಾರು 3.21 ಕೋಟಿರೂ. ವೆಚ್ಚದಲ್ಲಿ ಬೇಸಿಗೆಯ ತಾಪವನ್ನು ತಣಿಸಲು ಭರದ ಸಿದ್ಧತೆ ನಡೆಸಿದೆ.
ಕೂಲ್ ಪೇಂಟಿಂಗ್ (Cool Painting): ಭಕ್ತರು ನಡೆಯುವ ದಾರಿಗಳಲ್ಲಿ ಕಾಲುಗಳು ಸುಡದಂತೆ ಶ್ರೀವಾರಿ ದೇವಾಲಯದ ಮಾಡ ಬೀದಿಗಳು, ಸೇವಾ ಸದನ, ವರಾಹ ಸ್ವಾಮಿ ಅತಿಥಿ ಗೃಹ ಮತ್ತು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಪ್ರದೇಶಗಳಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ‘ಕೂಲ್ ಪೇಂಟಿಂಗ್’ ಮಾಡಿಸಲಾಗಿದೆ.
ಜರ್ಮನ್ ಶೆಡ್ಗಳು (German Sheds): ಭಕ್ತರು ಬಿಸಿಲಿನಲ್ಲಿ ನಿಲ್ಲದಂತೆ ದೇವಾಲಯದ ಮುಂದೆ ಅತ್ಯಾಧುನಿಕ ಜರ್ಮನ್ ಶೆಡ್ಗಳನ್ನು ನಿರ್ಮಿಸಲಾಗಿದೆ. ಲಡ್ಡು ಕೌಂಟರ್ಗಳು ಮತ್ತು ಕಲ್ಯಾಣಕಟ್ಟೆ ಪ್ರದೇಶಗಳಲ್ಲೂ ಆಶ್ರಯ ವ್ಯವಸ್ಥೆ ಮಾಡಲಾಗಿದೆ ಭಕ್ತರಿಗಾಗಿ ಹೆಚ್ಚುವರಿ ಕುಡಿಯುವ ನೀರು, ಶೌಚಾಲಯ ಮತ್ತು ನೆರಳಿನ ವ್ಯವಸ್ಥೆಯನ್ನು ಸುಧಾರಿಸಲಾಗಿದೆ.
ತಂತ್ರಜ್ಞಾನದ ಬಳಕೆ: ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ಭಕ್ತರ ದಟ್ಟಣೆಯನ್ನು ಪ್ರತಿ ನಿಮಿಷವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ. ದತ್ತಾಂಶ ವಿಶ್ಲೇಷಣೆ (Data Analytics) ಬಳಸಿ ಸಾಮಾನ್ಯ ಭಕ್ತರಿಗೆ ಶೀಘ್ರವಾಗಿ ದರ್ಶನ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಟಿಟಿಡಿ ಕೈಗೊಂಡಿರುವ ಈ ಮುನ್ನೆಚ್ಚರಿಕೆ ಕ್ರಮಗಳಿಗೆ ಭಕ್ತರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

