ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಮರದ ಕೆಳಗೆ ಆಶ್ರಯ ಪಡೆದಿದ್ದ ವೃದ್ಧೆಯೊಬ್ಬರು ಸಿಡಿಲು ಬಡಿದು ದುರಂತ ಅಂತ್ಯ ಕಂಡಿದ್ದರೆ, ಕಲಬುರಗಿಯಲ್ಲಿ ಸಿಡಿಲಿನ ಹೊಡೆತಕ್ಕೆ ಎರಡು ಎತ್ತುಗಳು ಬಲಿಯಾಗಿವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಮರಗಳು ಧರೆಗುರುಳಿದ್ದು, ಹಲವೆಡೆ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿದೆ.
ಸೋಮವಾರ ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯ ಅವಾಂತರಕ್ಕೆ ಹಾವೇರಿ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳು ಸಾಕ್ಷಿಯಾಗಿವೆ.
ಆಲೂರು ತಾಲೂಕಿನ ಮಾದಿಹಳ್ಳಿಯಲ್ಲಿ ಮರದ ಕೆಳಗೆ ಆಶ್ರಯ ಪಡೆದಿದ್ದ ನೀಲಮ್ಮ (70) ಎಂಬ ವೃದ್ಧೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಆಳಂದ ಸಮೀಪದ ಹಿರೋಳ್ಳಿಯಲ್ಲಿ ಸಿಡಿಲು ಬಡಿದ ಪರಿಣಾಮ ಎರಡು ಎತ್ತುಗಳು ಸಾವನ್ನಪ್ಪಿವೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕಳಸ ಭಾಗದಲ್ಲಿ ಸುಮಾರು ಒಂದು ಗಂಟೆ ಕಾಲ ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಜೆ 6 ಗಂಟೆಯ ನಂತರ ಭಾರಿ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ.ಉಜಿರೆ-ಕೊಕ್ಕಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ರೆಂಬೆ ಬಿದ್ದಿದ್ದು, ಕಾರಿನಲ್ಲಿದ್ದ ಪತ್ರಕರ್ತರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- ವಿದ್ಯುತ್ ವ್ಯತ್ಯಯ: ಸುಳ್ಯದ ಹಲವೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಉತ್ತರ ಕರ್ನಾಟಕದಲ್ಲಿ ತಂಪಾದ ವಾತಾವರಣ
ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ ಸುರಿದ ಮಳೆಯು ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ತಂಪು ನೀಡಿದೆ. ಹಾವೇರಿ ಮತ್ತು ರಾಣೇಬೆನ್ನೂರು ಭಾಗದಲ್ಲೂ ಉತ್ತಮ ಮಳೆಯಾದ ವರದಿ ಬಂದಿದೆ.
ಆಸ್ತಿಪಾಸ್ತಿ ಹಾನಿ
ಚಿಕ್ಕಮಗಳೂರಿನಲ್ಲಿ ಬೀಸಿದ ರಭಸದ ಗಾಳಿಗೆ ಮನೆಗಳ ಮೇಲಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಕೊಡಗಿನ ಎಮ್ಮೇಮಾಡು ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿದಿದೆ.

