ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಗಮಗಳು ನೀಡಿದ ಪ್ರಸ್ತಾವನೆಯನ್ನು ನೌಕರರ ಸಂಘಟನೆಗಳ ತಿರಸ್ಕರಿಸಿವೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ನೇತೃತ್ವದಲ್ಲಿ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರೊಂದಿಗೆ ನಡೆದ ಸಭೆ ಮತ್ತೆ ವಿಫಲವಾಗಿದೆ. ಏಪ್ರಿಲ್ 6ರಂದು ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳ ನಡುವೆ ನಡೆದ ಸಭೆಯಲ್ಲಿ ನಿಗಮ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇಕಡ 3, ಕೆಎಸ್ಆರ್ಟಿಸಿ, NWKRTC, KKRTC ನೌಕರರಿಗೆ ಶೇಕಡ 5ರಷ್ಟು ವೇತನ ಹೆಚ್ಚಳದ ಪ್ರಸ್ತಾವನೆ ಮುಂದಿಟ್ಟಿತ್ತು.
ಇದಕ್ಕೆ ಸಾರಿಗೆ ನೌಕರರ ಸಂಘಟನೆಗಳು ಅನುಮತಿಸಿರಲಿಲ್ಲ. ಶುಕ್ರವಾರದ ಸಭೆಯಲ್ಲಿಯೂ ಈ ವಿಚಾರವಾಗಿ ಮತ್ತೆ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ನಿಗಮಗಳು ನಾಲ್ಕು ನಿಗಮಗಳ ನೌಕರರಿಗೆ ಶೇಕಡ 7ರಷ್ಟು ವೇತನ ಹೆಚ್ಚಳ ಮಾಡಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಸಾರಿಗೆ ನೌಕರರ ಸಂಘದ ಪ್ರಮುಖರು ಶೇಕಡ 25ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಸಚಿವರಿಗೆ ಈ ವಿಷಯ ತಿಳಿಸಿ ಮತ್ತೆ ಸಭೆ ನಡೆಸುವುದಾಗಿ ಅಧಿಕಾರಿಗಳು ನೌಕರರ ಸಂಘದ ಪ್ರಮುಖರಿಗೆ ಹೇಳಿದ್ದಾರೆ. ಹೀಗಾಗಿ ಸಭೆ ಮತ್ತೆ ವಿಫಲವಾಗಿದೆ.

