ತಮ್ಮದೇ ಪುತ್ಥಳಿಗೆ ತಾವೇ ಹಾರ ಹಾಕುವ ಸಿಎಂ ಸಿದ್ದರಾಮಯ್ಯರ ಎಐ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ನನ್ನಿಂದ ಒಂದು ಪ್ರಮಾದ ನಡೆಯಿತು. ಒಂದು ರೀತಿಯಿಂದ ಅದು ಎಚ್ಚರ ತಪ್ಪಿ ನಡೆದ ಘಟನೆ. ಅದಕ್ಕಾಗಿ ನನ್ನ ಈ ಪ್ರಾಮಾಣಿಕ ವಿಷಾದ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದೇ ಪುತ್ಥಳಿಗೆ ತಾವೇ ಹಾರ ಹಾಕುವ ಫೋಟೋ ನೋಡಿದೆ. ಆ ಫೋಟೋ ರಾಜ್ಯದ ಒಂದು ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ನಾನು ಆ ಫೋಟೋವನ್ನು ನನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕೆ ಮಾಡಿದ್ದೆ.
ಕೆಲವು ಗಂಟೆಗಳ ನಂತರ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ನನಗೆ ವಾಟ್ಸಾಪ್ ಮೂಲಕ ಸಂದೇಶ ಕಳಿಸಿ “ಈ ಫೋಟೋ AI generated ಫೋಟೋ” ಎಂದು ತಿಳಿಸಿದರು. ತಾವೂ ಸಹ ಉಪಸ್ಥಿತರಿದ್ದ ಆ ಕಾರ್ಯಕ್ರಮದಲ್ಲಿ ಈ ರೀತಿ ನಡೆಯಲಿಲ್ಲ. ಸಿದ್ದರಾಮಯ್ಯನವರು ಆ ಪ್ರತಿಮೆಯಿಂದ ಎರಡು ಹೆಜ್ಜೆ ಹಿಂದೆ ನಿಂತಿದ್ದರೆಂದು ಹಾಗೂ ಸಿದ್ದರಾಮಯ್ಯನವರ ಆ ಪ್ರತಿಮೆಗೆ ಕೆ. ಜೆ. ಜಾರ್ಜ್ ಹಾರ ಹಾಕಿದ್ದು ಎಂದು ತಿಳಿಸಿದರು.
ನಾನು ತಕ್ಷಣ ನನ್ನಿಂದ ಆದ ಆ ಲೋಪದಿಂದ ಬೇಸರಗೊಂಡು ನನ್ನ ಸಾಮಾಜಿಕ ಜಾಲತಾಣದಿಂದ ಆ ಪೋಸ್ಟ್ ಅನ್ನು delete ಮಾಡಿ ವಿಶ್ವೇಶ್ವರ ಭಟ್ಟರಿಗೆ “Feeling sorry for my indiscretion” ಎಂದು ಮಾರುತ್ತರ ಕೊಟ್ಟೆ.
ನಂತರ ವಿಶ್ವೇಶ್ವರ ಭಟ್ಟರು ಆ ದಿನಪತ್ರಿಕೆಯಲ್ಲಿ ಈ ಫೋಟೋ ಪ್ರಕಟವಾಗಿರುವ ಕುರಿತು ವಿಷಾದ ವ್ಯಕ್ತಪಡಿಸಿರುವುದನ್ನು ನನಗೆ ಕಳಿಸಿದರು. ಎರಡು ದಿನಗಳಿಂದ ನಾನು ಮಾಡಿದ ಆ ಲೋಪ ಮನಸ್ಸು ಕೊರೆಯುತ್ತಿತ್ತು. ನಾನು ಮಾಡಿದ್ದು ನಿಜಕ್ಕೂ ಸರಿಯಲ್ಲ, ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕಿತ್ತು ಎಂದು ನನಗೆ ಮನಸ್ಸಿಗೆ ತೀವ್ರವಾಗಿ ಕಾಡಿದೆ. ನನ್ನಿಂದ ಈ ರೀತಿ ಆಗಬಾರದಿತ್ತು. ಆದ್ದರಿಂದ ನಾನು ಮಾಡಿದ ಆ ಒಂದು ಲೋಪಕ್ಕೆ ಬೇಷರತ್ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

