ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ.
ಆಡಿದ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಟ್ರೋಫಿ ಎತ್ತಿಹಿಡಿದು ಚಾಂಪಿಯನ್ ಆಗಿರುವ ತಂಡ ಈ ಮಟ್ಟಕ್ಕೆ ಕಳಪೆ ಆಟವಾಡುತ್ತಿರುವುದನ್ನು ಕಂಡು ಮುಂಬೈ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳೂ ಸಹ ಆರಂಭವಾಗಿದ್ದು, ಅನೇಕ ಮಂದಿ ನೆಟ್ಟಿಗರು ಮುಂಬೈ ಇಂಡಿಯನ್ಸ್ ವೈಫಲ್ಯಕ್ಕೆ ನಾಯಕತ್ವವೇ ಕಾರಣ ಎಂದಿದ್ದಾರೆ.
ಹೌದು, ನಿನ್ನೆ ( ಏಪ್ರಿಲ್ 16 ) ತವರು ನೆಲ ವಾಂಖೆಡೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲುಂಡ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಮಾಲೀಕರು ನಾಯಕತ್ವದ ಬದಲಾವಣೆ ಮಾಡದಿದ್ದರೆ ತಂಡದ ಏಳ್ಗೆ ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಪಾಂಡ್ಯ ಮೈದಾನದಲ್ಲಿ ಸಹ ಆಟಗಾರರ ವಿರುದ್ಧ ರೇಗುವುದನ್ನು ಬಿಟ್ಟರೆ ಜಾಣ್ಮೆಯಿಂದ ಬೆಂಬಲಿಸಿ ಉತ್ತಮ ಪ್ರದರ್ಶನ ಹೊರತೆಗೆಯುವ ಪ್ರಯತ್ನ ಮಾಡುತ್ತಿಲ್ಲ, ಪಂದ್ಯವಿಲ್ಲದ ವೇಳೆ ಅತಿಯಾಗಿ ಗರ್ಲ್‌ಫ್ರೆಂಡ್‌ಗೆ ಸಮಯ ನೀಡುತ್ತಾರೆ. ಇದೇ ಕಾರಣಕ್ಕೆ ನಾಯಕತ್ವ ನೆಲ ಕಚ್ಚಿದೆ ಎಂದು ಟೀಕಿಸಿದ್ದಾರೆ.
ಈ ವೇಳೆ ನಿನ್ನೆ ಪಂದ್ಯ ಮುಗಿದ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರರು ತೆರಳುತ್ತಿದ್ದ ಬಸ್‌ಗೆ ಹಾರ್ದಿಕ್ ಗರ್ಲ್‌ಫ್ರೆಂಡ್ ಮಹೀಕಾ ಆಗಮಿಸಿದರು. ಎಲ್ಲ ಆಟಗಾರರು ಹಾಗೂ ಸಿಬ್ಬಂದಿ ಬಸ್ ಹತ್ತಿ ಕಾಯುತ್ತಿದ್ದರೆ ಆಕೆ ತಡವಾಗಿ ಆಗಮಿಸಿದ್ದರು. ಇದರಿಂದ ಬಸ್‌ನಲ್ಲಿದ್ದ ಆಟಗಾರರು ಹತಾಶೆಗೊಳಗಾಗಿದ್ದಾರೆ ಎಂದು ನೆಟ್ಟಿಗರು ವಿಡಿಯೊ ಹಂಚಿಕೊಂಡು ಆರೋಪಿಸಿದ್ದಾರೆ.
ಅಲ್ಲದೇ ಹೀಗೆ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಗಮನಹರಿಸಿ ಆಟದ ಕಡೆ ಗಮನ ಕೊಡದ ಪಾಂಡ್ಯರನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬ ಕೂಗು ಕೇಳಿಬಂದಿದೆ. ಹೀಗೆ ಮಹೀಕಾ ಶರ್ಮಾ ನಡೆಗೆ ಮುಂಬೈ ಆಟಗಾರರು ಬೇಸರಗೊಂಡರೆ, ಮತ್ತೊಂದು ಬಸ್‌ನಲ್ಲಿ ತೆರಳಿದ ಹಾರ್ದಿಕ್ ಪಾಂಡ್ಯ ಕ್ಯಾಮೆರಾಗೆ ಮುಖ ತೋರಿಸದೇ ಗಾಢವಾಗಿ ಯೋಚಿಸುತ್ತಾ ಕುಳಿತಿರುವುದು ಕಂಡುಬಂದಿದೆ.

