ನವದೆಹಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಅಸ್ಸಾಂ ಪೊಲೀಸರು ದಾಖಲಿಸಿರುವ ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ತೆಲಂಗಾಣ ಹೈಕೋರ್ಟ್ ನೀಡಿದ್ದ ‘ಟ್ರಾನ್ಸಿಟ್ ಮುಂಜಾಗ್ರತಾ ಜಾಮೀನು’ ವಿಸ್ತರಿಸಲು ಸುಪ್ರೀಂಕೋರ್ಟ್ ಶುಕ್ರವಾರ (ಏಪ್ರಿಲ್ 17) ನಿರಾಕರಿಸಿದೆ.
ಹೌದು. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಸ್ಸಾಂನಲ್ಲಿ ದಾಖಲಾಗಿರುವ ಎಫ್‌ಐಆರ್ (FIR) ಸಂಬಂಧಿತ ಜಾಮೀನು ಅವಧಿ ವಿಸ್ತರಣೆಯ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಈ ಕೂಡಲೇ ಸಂಬಂಧಪಟ್ಟ ಅಸ್ಸಾಂ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿದೆ. ದಾಖಲೆಗಳ ಫೋರ್ಜರಿ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಖೇರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ನೀಡಿದ ದೂರಿನನ್ವಯ ಪವನ್ ಖೇರಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಲ್ಲಿ ನಡೆದಿದ್ದೇನು?
ಜಸ್ಟಿಸ್ ಜೆ.ಕೆ. ಮಹೇಶ್ವರಿ ಮತ್ತು ಜಸ್ಟಿಸ್ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಪೀಠವು ನಿರಾಕರಿಸಿತು. ಅಲ್ಲದೆ, ಮುಂಬರುವ ಮಂಗಳವಾರದವರೆಗೆ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂಬ ಖೇರಾ ಅವರ ಮನವಿಯನ್ನೂ ನ್ಯಾಯಾಲಯ ಒಪ್ಪಲಿಲ್ಲ.
“ಒಂದು ವೇಳೆ ಸಂಬಂಧಪಟ್ಟ ನ್ಯಾಯಾಲಯವು ಕಾರ್ಯನಿರ್ವಹಿಸದಿದ್ದರೆ, ತುರ್ತು ವಿಚಾರಣೆಗೆ ವಿನಂತಿ ಮಾಡಬಹುದು. ಅಸ್ತಿತ್ವದಲ್ಲಿರುವ ಪದ್ಧತಿಯಂತೆ ಅದನ್ನು ಪರಿಗಣಿಸಲಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿತು.
ಆಧಾರ್ ಕಾರ್ಡ್ ವಿವಾದ:
ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ಅವರು ಪವನ್ ಖೇರಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು. “ಖೇರಾ ಅವರು ತಮ್ಮ ಆಧಾರ್ ಕಾರ್ಡ್‌ನ ಮುಂಭಾಗ ಮತ್ತು ಪತ್ನಿಯ ಆಧಾರ್ ಕಾರ್ಡ್‌ನ ಹಿಂಭಾಗವನ್ನು ಬಳಸಿ ದಾಖಲೆ ಸೃಷ್ಟಿಸಿ ತೆಲಂಗಾಣದ ನಿವಾಸಿಯೆಂದು ಸುಳ್ಳು ಮಾಹಿತಿ ನೀಡಿದ್ದಾರೆ. ನಕಲಿ ದಾಖಲೆಗಳ ಮೂಲಕ ಹೈಕೋರ್ಟ್‌ನಿಂದ ಪರಿಹಾರ ಪಡೆದಿದ್ದಾರೆ” ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪವನ್ ಖೇರಾ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, “ಅರ್ಜಿಯನ್ನು ಅವಸರದಲ್ಲಿ ಸಲ್ಲಿಸುವಾಗ ದಾಖಲೆಗಳಲ್ಲಿ ಅದಲುಬದಲಾಗಿದೆ. ಇದೊಂದು ಸಣ್ಣ ತಪ್ಪು, ಉದ್ದೇಶಪೂರ್ವಕ ಫೋರ್ಜರಿ ಅಲ್ಲ” ಎಂದು ಸಮರ್ಥಿಸಿಕೊಂಡರು. ಆದರೆ ನ್ಯಾಯಾಲಯವು ಇದನ್ನು “ಸಣ್ಣ ತಪ್ಪು” ಎಂದು ಒಪ್ಪಲು ನಿರಾಕರಿಸಿತು.
ಪ್ರಕರಣದ ಹಿನ್ನೆಲೆ:
ಅಸ್ಸಾಂ ಸಿಎಂ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಬೇರೆ ಬೇರೆ ದೇಶಗಳ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಪವನ್ ಖೇರಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಗುಹಾವಟಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಏಪ್ರಿಲ್ 10 ರಂದು ತೆಲಂಗಾಣ ಹೈಕೋರ್ಟ್ ಅವರಿಗೆ ಒಂದು ವಾರದ ಟ್ರಾನ್ಸಿಟ್ ಜಾಮೀನು ನೀಡಿತ್ತು, ಇದನ್ನು ಈಗ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

