HomeAgricultureರೈತರಿಗೆ ಸಬ್ಸಿಡಿ ರಸಗೊಬ್ಬರ ಖರೀದಿಗೆ ‘ಎಫ್.ಐ.ಡಿ' ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

ರೈತರಿಗೆ ಸಬ್ಸಿಡಿ ರಸಗೊಬ್ಬರ ಖರೀದಿಗೆ ‘ಎಫ್.ಐ.ಡಿ’ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ನೈಜ ರೈತರಿಗೆ ಮಾತ್ರ ಸಬ್ಸಿಡಿ ಸಹಿತ ಗೊಬ್ಬರ ತಲುಪಿಸಲು ಎಫ್‌ಐಡಿ (ಫಾರ್ಮರ್ ಐಡಿ) ಸಂಖ್ಯೆ ಕಡ್ಡಾಯಗೊಳಿಸಲಾಗಿದೆ ಎಂದು ಬಳ್ಳಾರಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.

ಕೃಷಿ ಇಲಾಖೆ ಅಭಿವೃದ್ಧಿಪಡಿಸಿರುವ ‘ಕೆ-ಕಿಸಾನ್’ ಹೊಸ ತಂತ್ರಾಂಶದ ಮೂಲಕವೇ ಇನ್ನು ಮುಂದೆ ರಸಗೊಬ್ಬರ ವಿತರಣೆ ನಡೆಯಲಿದೆ. ರೈತರು ತಮ್ಮ ಎಫ್.ಐ.ಡಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಬಳಸಿ, ತಮ್ಮ ಜಮೀನಿನ ವಿಸ್ತೀರ್ಣ ಹಾಗೂ ಬೆಳೆದ ಬೆಳೆಗಳಿಗೆ ಅನುಗುಣವಾಗಿ ಎಕರೆಗೆ ಒಂದು ಚೀಲ ಯೂರಿಯಾ ಮಾತ್ರ ಖರೀದಿಸಲು ಅವಕಾಶವಿರುತ್ತದೆ. ಮಾರಾಟಗಾರರು ಸಹ ಇದೇ ಮಾದರಿಯಲ್ಲಿ ವಿತರಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಎಫ್.ಐ.ಡಿ ಹೊಂದಿಲ್ಲದ ರೈತರು ತಕ್ಷಣವೇ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಎಫ್.ಐ.ಡಿ ಸೃಜಿಸಿಕೊಳ್ಳಬೇಕು. ಈಗಾಗಲೇ ಎಫ್.ಐ.ಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳು ಅದಕ್ಕೆ ಜೋಡಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ರಮ ಎಸಗಿದರೆ ಜೈಲು ಶಿಕ್ಷೆ ಎಚ್ಚರಿಕೆ:

ರೈತರಲ್ಲದವರು ಇತರರ ಆಧಾರ್ ಅಥವಾ ಎಫ್.ಐ.ಡಿ ಬಳಸಿ ಗೊಬ್ಬರ ಸಂಗ್ರಹಿಸುವುದು, ಕೃತಕ ಅಭಾವ ಸೃಷ್ಟಿಸುವುದು ಅಥವಾ ಕೃಷಿಯೇತರ ಚಟುವಟಿಕೆಗಳಿಗೆ ಗೊಬ್ಬರ ಬಳಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಬೆಳೆ ಇಲ್ಲದಿದ್ದರೂ ಅಸಹಜವಾಗಿ ಹೆಚ್ಚಿನ ಗೊಬ್ಬರ ಮಾರಾಟ ಮಾಡಿದ್ದ 102 ಮಾರಾಟಗಾರರಿಗೆ ಮಾರಾಟ ತಡೆ ನೋಟಿಸ್ ಹಾಗೂ 28 ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ:

ರಸಗೊಬ್ಬರವನ್ನು ಜಿಲ್ಲೆಯಿಂದ ಹೊರಗೆ ಅಥವಾ ಹೊರ ರಾಜ್ಯಗಳಿಗೆ ಸಾಗಿಸುವಂತಿಲ್ಲ. ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಯೂರಿಯಾ ಜೊತೆಗೆ ರೈತರು ಇಚ್ಛಿಸದ ಇತರ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರುವಂತಿಲ್ಲ. ಕಡ್ಡಾಯವಾಗಿ ಪಿಓಎಸ್ ಯಂತ್ರದ ಮೂಲಕವೇ ವಿತರಣೆ ಮಾಡಬೇಕು.

ರೈತರಲ್ಲಿ ಮನವಿ:

ರೈತರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳಬಾರದು. ಅಂತಹ ದಾಸ್ತಾನುಗಳನ್ನು ‘ಅನುಮಾನಾಸ್ಪದ ದಾಸ್ತಾನು’ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು.

ಒಟ್ಟಾರೆ ಉಸ್ತುವಾರಿಗಾಗಿ ವಿವಿಧ ಹಂತಗಳಲ್ಲಿ ನೋಡಲ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಯಾವುದೇ ನ್ಯೂನತೆ ಕಂಡುಬAದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ 1985 ಮತ್ತು ಅಗತ್ಯ ವಸ್ತುಗಳ ಕಾಯಿದೆ 1955 ರಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular