ಚಿಕ್ಕಮಗಳೂರು: ತಾನು ಐಎ ಎಸ್ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೊಬ್ಬ ವೈದ್ಯರು, ಉದ್ಯಮಿಗಳು, ಅಧಿಕಾರಿಗಳಿಗೆ ವಂಚಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ತಾನು 2023ರ ಬ್ಯಾಚ್ನ ಐಎಎಸ್ ಅಧಿಕಾರಿ ಎಂದು ನಂಬಿಸಿ ವೈದ್ಯರು, ಉದ್ಯಮಿಗಳು, ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಚಿಕ್ಕಮಗಳೂರು ಮೂಲದ ಮಿಥುನ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಟೆಂಡರ್ ಕೊಡಿಸುವ ಆಮಿಷವೊಡ್ಡಿದ್ದ ಈತ ಹಲವರಿಂದ ಹಣ ಪಡೆದು ವಂಚಿಸಿದ್ದ.
ವಂಚಕ ಮಿಥುನ್ ನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಬಿದ್ದಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ವಿಭಾಗದ ಮುಖ್ಯಸ್ಥ ಹಾಗೂ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರಿಗೆ, ತಾನು ಐಎಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಸ್ವತಃ ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್ಗಳ ಸಭೆ ನಡೆಸಿ ಎಲ್ಲರನ್ನೂ ನಂಬಿಸಿ ತನ್ನ ಬಲೆಗೆ ಕೆಡವಿದ್ದ.
ಜಿಲ್ಲಾ ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಮಿಥುನ್ ನಂಬಿಸಿದ್ದ. ಇದಕ್ಕಾಗಿ ಶೇ 20ರಷ್ಟು ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ ಬರೋಬ್ಬರಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.
ತನ್ನ ಪ್ರಭಾವ ತೋರಿಸಲು ಬೆಂಗಳೂರಿನ ಓರ್ವ ಡಿಸಿಪಿ ಹೆಸರನ್ನು ಬಳಸಲು ಹೋಗಿ ಎಡವಟ್ತಾಗಿದೆ. ಈ ವೇಳೆ ಅಮೃತಹಳ್ಳಿ ಪೊಲೀಸರಿಗೆ ಅನುಮಾನ ಬಂದಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಮೋಸ, ವಂಚನೆ ಜಾಲ ಬಯಲಾಗಿದೆ. ತನಿಖೆ ವೇಳೆ ಈತ ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಪಾಸಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ ಪ್ರಭಾವಿ ಸ್ವಾಮೀಜಿಗಳನ್ನೂ ಈತ ನಂಬಿಸಿದ್ದ ಎನ್ನಲಾಗಿದೆ.
ಸದ್ಯ ಪೊಲೀಸರು ಮಿಥುನ್ ಹಾಗೂ ವಂಚನೆಗೊಳಗಾದವರನ್ನು ವಿಚಾರಣೆ ನಡೆಸಿದ್ದಾರೆ. ಇನ್ನೂ ಹಲವು ಆಸ್ಪತ್ರೆ ಮಾಲೀಕರಿಗೆ ಈತ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.

