ನಿನ್ನೆ ( ಏಪ್ರಿಲ್ 15 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 23ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 146 ರನ್ಗಳಿಗೆ ಆಲ್ಔಟ್ ಆಗಿ 147 ರನ್ಗಳ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 15.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಆರ್ಸಿಬಿ ನಾಯಕ ರಜತ್ ಪಟಿದಾರ್ ವಿಶ್ವಾಸವನ್ನು ಕಾಪಾಡಿಕೊಳ್ಳುವಲ್ಲಿ ಬೌಲರ್ಗಳು ಯಶಸ್ವಿಯಾದರು. ಪಂದ್ಯದಲ್ಲಿ ರಸಿಕ್ ಧರ್ ಸಲಾಮ್ 4, ಭುವನೇಶ್ವರ್ ಕುಮಾರ್ 3, ಕೃನಾಲ್ ಪಾಂಡ್ಯ 2 ವಿಕೆಟ್ ಹಾಗೂ ಜೋಶ್ ಹೇಜಲ್ವುಡ್ ಒಂದು ವಿಕೆಟ್ ಪಡೆದರು.
ಹೀಗೆ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ ಗೆಲುವಿಗೆ ಪ್ರಮುಖ ಕಾರಣವಾದ ಆರ್ಸಿಬಿ ಬೌಲಿಂಗ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಬರಲಿದೆ ಎಂದು ಎಲ್ಲರೂ ಊಹಿಸಿದ್ದರು. ಅದರಲ್ಲಿಯೂ ನಾಲ್ಕು ವಿಕೆಟ್ ಪಡೆದ ರಸಿಕ್ ಧರ್ ಸಲಾಮ್ಗೆ ಈ ಪ್ರಶಸ್ತಿ ಪಕ್ಕಾ ಎನ್ನಲಾಗಿತ್ತು. ಆದರೆ ಆಯ್ಕೆಗಾರರು ಜೋಶ್ ಹೇಜಲ್ವುಡ್ಗೆ ಪ್ರಶಸ್ತಿ ನೀಡಿದರು.
ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ನಾಲ್ಕು ವಿಕೆಟ್ ಪಡೆದ ರಸಿಕ್ ಬದಲು ಕೇವಲ ಒಂದು ವಿಕೆಟ್ ಪಡೆದ ಹೇಜಲ್ವುಡ್ಗೆ ಹೇಗೆ ಪ್ರಶಸ್ತಿ ಕೊಟ್ಟರು ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಇದಕ್ಕೆ ಕ್ರಿಕೆಟ್ ಪರಿಣಿತರು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ನೀಡಿದ್ದು, ರಸಿಕ್ ಪವರ್ಪ್ಲೇನಲ್ಲಿ 2 ಓವರ್ ಬೌಲಿಂಗ್ ಮಾಡಿ 12 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಇತ್ತ ಹೇಜಲ್ವುಡ್ ಪವರ್ಪ್ಲೇನಲ್ಲಿ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿದ್ದರು. ಇನ್ನು ರಸಿಕ್ ಕೊನೆಯ ಓವರ್ನಲ್ಲಿ ಎರಡು ವಿಕೆಟ್ ಪಡೆದದ್ದು ಸೇರಿದಂತೆ ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್ ಪಡೆದರು ಹಾಗೂ 4 ಓವರ್ ಮಾಡಿ 24 ರನ್ ನೀಡಿದರು. ಹೇಜಲ್ವುಡ್ 4 ಓವರ್ ಮಾಡಿ 20 ರನ್ ನೀಡಿ ಒಂದು ವಿಕೆಟ್ ಪಡೆದರು. ಪವರ್ಪ್ಲೇನಲ್ಲಿ ಕಡಿಮೆ ರನ್ ನೀಡಿದ್ದು ಹಾಗೂ ಹೆಚ್ಚು ಡಾಟ್ ಬಾಲ್ ಹಾಕಿದ್ದು ಅವರಿಗೆ ಪ್ರಶಸ್ತಿ ಬರಲು ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

