ಮಂಡ್ಯ: ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ, ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶಿಷ್ಟ ರೀತಿಯ ನಾಲ್ವಡಿ ಕೆಂಪು ಪೇಟ ಸಿದ್ಧವಾಗಿದೆ.
ಕಲಾವಿದ ನಂದನ್ ಸಿಂಗ್ ಎಂಬುವವರು ಸಿದ್ಧ ಪಡಿಸಿದ ಈ ಪೇಟ ವೈಶಿಷ್ಯಪೂರ್ಣವಾಗಿದೆ. ಆದಿಚುಂಚನಗಿರಿ ಮಠದಲ್ಲಿ ಗುರು ಬಹಿರವೈಕ್ಯ ಮಂದಿರ ಉದ್ಘಾಟನೆ ಬಳಿಕ ಬಿಜಿಎಸ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಈ ಪೇಟ ತೊಡಿಸಿ ಗೌರವಿಸಲಾಗುವುದು.
ಕೆಂಪು ಬಣ್ಣದ ನಾಲ್ವಡಿ ಮೈಸೂರು ಪೇಟ ಸಿದ್ದಪಡಿಸಿರುವ ಕಲಾವಿದ ನಂದನ್ ಈ ಪೇಟದ ವಿಶೇಷದ ಬಗ್ಗೆ ವಿವರಿಸಿದ್ದಾರೆ. ಮೋದಿಯವರ ಸ್ವಾಗತಕ್ಕೆ ಸಿದ್ಧವಾಗಿರುವ ಮೈಸೂರು ಪೇಟ ಇದು. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೇಟದ ಮಾದರಿಯಾಗಿದ್ದು, ಇದರಲ್ಲಿ ಮೈಸೂರು ಸಿಲ್ಕ್ ಹಾಗೂ ಬನಾರಸ್ ಸಾಫ್ಟ್ ಸಿಲ್ಕ್ನ್ನು ಬಳಸಲಾಗಿದೆ. ಇದನ್ನು ನಾಲ್ವಡಿ ಕೆಂಪು ಪೇಟ ಎಂದು ಕರೆಯುತ್ತಾರೆ. ಈ ಒಂದು ಪೇಟವನ್ನು ತಯಾರು ಮಾಡಲು 5 ದಿನ ಸಮಯ ಬೇಕಾಯಿತು. ಇದನ್ನು ಮೋದಿಯವರ ಸ್ವಾಗತಕ್ಕೆ ಮೈಸೂರಿನ ಸೇವಾ ಟ್ರಸ್ಟ್ ಕೆಂಪು ಪೇಟ ಬೇಕು ಎಂದು ತಿಳಿಸಿತ್ತು. ಈ ಹಿಂದೆ ಮೋದಿಯವರಿಗೆ ಕೆಂಪೇಗೌಡ ಮಾದರಿಯ ಪೇಟವನ್ನು ಮಾಡಿಕೊಡಲಾಗಿತ್ತು ಎಂದು ವಿವರಿಸಿದ್ದಾರೆ.
ಈ ರೀತಿಯ ಪೇಟವನ್ನು ಮೈಸೂರಿನ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದರು, ಅದೇ ಈ ಪೇಟದ ವಿಶೇಷತೆ. ಅಂತಹದನ್ನೇ ಮೋದಿ ಅವರಿಗೆ ತಯಾರು ಮಾಡಲಾಗಿದೆ. ಅದಕ್ಕೆ ಈ ಪೇಟಕ್ಕೆ ನಾಲ್ವಡಿ ಪೇಟ ಎಂದು ಕರೆಯುತ್ತಾರೆ.
ಇದನ್ನು ತಯಾರು ಮಾಡಲು ಬನಾರಸ್ ಸಿಲ್ಕ್ ಬೇಕು. ಮಧ್ಯದಲ್ಲಿ ಮೈಸೂರಿನ ರಾಜ ಲಾಂಛನ ಗಂಡುಬೇರುಂಡವನ್ನು ಸೇರಿಸಲಾಗಿದೆ. ಎರಡೂ ಕಡೆ ಸಣ್ಣ ಸಣ್ಣ ಮುತ್ತುಗಳನ್ನು ಸೇರಿಸಲಾಗಿದೆ. ಪ್ರಧಾನ ಮಂತ್ರಿಯವರ ಸ್ವಾಗತಕ್ಕೆ ಈ ರೀತಿಯ ಪೇಟ ಮಾಡಲು ಅವಕಾಶ ಕೊಟ್ಟಿದ್ದು ತುಂಬಾ ಸಂತೋಷ. ಈ ರೀತಿ ಗುರುತಿಸಿ ನಮಗೆ ಅವಕಾಶ ಕೊಡುವುದರಿಂದ ನಮ್ಮಲ್ಲಿ ಇರುವ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

