ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಮದುವೆಯಾಗಿದ್ದರೂ ತನ್ನ ತಂಗಿ ಪ್ರಿಯಕರನ ಜೊತೆ ಹೋಗಿದ್ದಕ್ಕೆ ಆಕೆಯನ್ನು ಮನೆಗೆ ಕರೆದು ವಿಷ ನೀಡಿ ಕೊಲೆಗೈದ ಅಣ್ಣ ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿರುವ ಘೋರ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಡೀ ರಾಜ್ಯವೇ ಬಿಚ್ಚಿ ಬಿದ್ದಿದೆ. ಸತ್ತೆವ್ವಾ ಹೆಳವರ್ (25) ಕೊಲೆಯಾದ ಯುವತಿ. ಕುಟುಂಬದವರಿಂದಲೇ ವಿಷ ನೀಡಿ ಹತ್ಯೆ ಮಾಡಿ, ಬಳಿಕ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ್ದಾರೆ.
ಸತ್ತೆವ್ವಾ ನದಿಗುಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಮದುವೆಗೆ ಕುಟುಂಬದವರು ಒಪ್ಪಿರಲಿಲ್ಲ. ವಿಷಯ ತಿಳಿದು ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ಸತ್ತೆವ್ವಾಳನ್ನು ವಿವಾಹ ಮಾಡಿ ಕೊಡಲಾಗಿತ್ತು. ಮದುವೆಯಾದ ಬಳಿಕವೂ ಸತ್ತೆವ್ವಾ ತನ್ನ ಪ್ರಿಯಕರ ಕೃಷ್ಣನ ಜೊತೆ ಸಂಪರ್ಕದಲ್ಲಿದ್ದು್ಳು. ಫೆಬ್ರವರಿ 17ರಂದು ಸತ್ತೆವ್ವಾ ಹಾಗೂ ಕೃಷ್ಣಾ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ, ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಕುಟುಂಬದವರು ಹುಡುಕಾಡಿದ ಬಳಿಕ ಸುಮಾರು 15 ದಿನಗಳ ಬಳಿಕ ಇಬ್ಬರೂ ಪತ್ತೆಯಾಗಿದ್ದರು. ಸತ್ತೆವ್ವಳನ್ನು ಮನೆಗೆ ಕರೆತಂದಿದ್ದರು. ಬಳಿಕ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಕೃಷ್ಣನನ್ನು ಮರೆಯುವಂತೆ ಸತ್ತೆವ್ವಾಳ ಮೇಲೆ ಒತ್ತಡ ಹಾಕಲಾಗಿತ್ತು. ಆಕೆ ಒಪ್ಪದ ಹಿನ್ನೆಲೆಯಲ್ಲಿ, ಮೊದಲಿಗೆ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಲಾಯಿತು. ಅಲ್ಲಿಯೂ ಒತ್ತಡ ಮುಂದುವರೆದ ಹಿನ್ನೆಲೆಯಲ್ಲಿ, ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ಸತ್ತೆವ್ವಳಿಗೆ ವಿಷ ನೀಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಸತ್ತೆವ್ವಾಳ ಅಣ್ಣ ಶಾನೂರ ಹೆಳವರ್, ಚಿಕ್ಕಪ್ಪ ಪ್ರಕಾಶ್ ಹೆಳವರ್ ಮತ್ತು ಸಂಬಂಧಿ ಮಾಯಪ್ಪ ಹೆಳವಿ ಈ ಕೃತ್ಯವನ್ನೆಸಗಿದ್ದು, ಬಳಿಕ ಶವವನ್ನು ಸ್ಮಶಾನದಲ್ಲಿ ಸುಟ್ಟು ಹಾಕಿ, ಹಾಸಿಗೆ ಬಟ್ಟೆ ಸೇರಿಸಿ ಸಾಕ್ಷಿ ನಾಶಪಡಿಸಲಾಗಿದೆ.
ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಸಾತ್ತೆವ್ವಳನ್ನು ಕುಟುಂಬದವರೇ ಕೊಲೆ ಮಾಡಿರುವುದು ಬಯಲಾಗಿದೆ.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

