ಶಿವಮೊಗ್ಗ: ಶಿವಮೊಗ್ಗ ಹೊರ ವಲಯದ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಬಲಿ ಪಡೆದಿದ್ದ ಹಂಸಿನಿ ಹೆಸರಿನ ನೀರಾನೆ ಮೃತಪಟ್ಟಿದೆ.
ಮಾರ್ಚ್ 19 ರಂದು ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿನಿ ನೀರಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಮೀಕ್ಷಾ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದಾದ ನಂತರ ನೀರಾನೆ ಹಂಸಿನಿ ಗರ್ಭದಲ್ಲಿದ್ದ ಮರಿ ಮೃತಪಟ್ಟಿದ್ದು, ಇದೀಗ ತಾಯಿ ನೀರಾನೆ ಕೂಡ ಮೃತಪಟ್ಟಿದೆ.
12 ವರ್ಷದ ಹಂಸಿನಿ ನೀರಾನೆ ಹೊಟ್ಟೆಯಲ್ಲಿ ಮರಿ ಸಾವನ್ನಪ್ಪಿದ್ದರಿಂದ ಸೋಂಕು ತಗುಲಿದ್ದು, ತಜ್ಞ ಪಶು ವೈದ್ಯರ ತಂಡ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದೆ.
ಹಂಸಿನಿ ನೀರಾನೆ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಇದೀಗ ಮೂರನೇ ಬಾರಿಗೆ ಹಂಸಿನಿ ನೀರಾನೆ ಗರ್ಭ ಧರಿಸಿತ್ತು. ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಮರಿ ಮೃತಪಟ್ಟಿತ್ತು. ಇದೀಗ ತಾಯಿ ಹಂಸಿನಿ ನೀರಾನೆಯೂ ಮೃತಪಟ್ಟಿದೆ.

