ಸುಡುತ್ತಿರುವ ಏಪ್ರಿಲ್ ಬಿಸಿಲಿಗೆ ತಂಪು ಪಾನೀಯಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ದಕ್ಷಿಣ ಭಾರತದ, ಅದರಲ್ಲೂ ತಮಿಳುನಾಡಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಆಹಾರ ಕಂಬು ಕೂಳ್ (Kambu Koozh) ಅಥವಾ ಸಜ್ಜೆ ಅಂಬಲಿ ನಿಮಗಾಗಿ ಇದೆ. ಇದು ಕೇವಲ ಒಂದು ಪಾನೀಯವಲ್ಲ, ಇದೊಂದು ಅದ್ಭುತ ಪೌಷ್ಟಿಕಾಂಶದ ಗಣಿ.ಹಳ್ಳಿಗಳಲ್ಲಿ ಇಂದಿಗೂ ಮನೆಮಾತಾಗಿರುವ ಈ ಸಜ್ಜೆ ಅಂಬಲಿಯ ವಿಶೇಷತೆ ಮತ್ತು ರೆಸಿಪಿ ಇಲ್ಲಿದೆ ನೋಡಿ:
ಸಜ್ಜೆ ಅಂಬಲಿಯ ಆರೋಗ್ಯ ಗುಣಗಳು:
ದೇಹಕ್ಕೆ ತಂಪು: ಸಜ್ಜೆಯು ನೈಸರ್ಗಿಕವಾಗಿ ತಂಪು ಗುಣವನ್ನು ಹೊಂದಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಿ, ಸುಸ್ತು ಮತ್ತು ಆಯಾಸವನ್ನು ದೂರ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಇದನ್ನು ಹುದುಗಿಸಿ (Fermentation) ಮಾಡುವುದರಿಂದ ಇದರಲ್ಲಿ ಪ್ರೋಬಯಾಟಿಕ್ಸ್ ಹೆಚ್ಚಿರುತ್ತದೆ, ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ತೂಕ ಇಳಿಕೆಗೆ ಸಹಕಾರಿ: ಇದರಲ್ಲಿ ನಾರಿನಂಶ (Fibre) ಹೆಚ್ಚಿರುವುದರಿಂದ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುತ್ತದೆ.
ಮಧುಮೇಹಿಗಳಿಗೆ ಉತ್ತಮ: ಸಜ್ಜೆಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸಜ್ಜೆ ಅಂಬಲಿ ಮಾಡುವುದು ಹೇಗೆ?
ಬೇಕಾಗುವ ಪದಾರ್ಥಗಳು:
1 ಕಪ್ ಸಜ್ಜೆ ಅಥವಾ ಸಜ್ಜೆ ಹಿಟ್ಟು
3-4 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಮಜ್ಜಿಗೆ (ಬಳಸುವಾಗ)
ಹಸಿ ಈರುಳ್ಳಿ, ಹಸಿಮೆಣಸಿನಕಾಯಿ ಅಥವಾ ಉಪ್ಪಿನಕಾಯಿ (ನಂಚಿಕೊಳ್ಳಲು)
ತಯಾರಿಸುವ ವಿಧಾನ:
ಹಂತ 1: ಸಜ್ಜೆಯನ್ನು ಚೆನ್ನಾಗಿ ತೊಳೆದು ರಾತ್ರಿ ಪೂರ್ತಿ ನೆನೆಸಿಟ್ಟು, ಮರುದಿನ ನುಣ್ಣಗೆ ರುಬ್ಬಿಕೊಳ್ಳಿ. (ಹಿಟ್ಟು ಬಳಸುವುದಾದರೆ ಈ ಹಂತದ ಅಗತ್ಯವಿಲ್ಲ).
ಹಂತ 2: ಒಂದು ಪಾತ್ರೆಯಲ್ಲಿ ಸಜ್ಜೆ ಹಿಟ್ಟು ಮತ್ತು ನೀರನ್ನು ಬೆರೆಸಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಸಣ್ಣ ಉರಿಯಲ್ಲಿ ಕೈಬಿಡದೆ ಕೈಯಾಡಿಸುತ್ತಾ ಬೇಯಿಸಿ.
ಹಂತ 3: ಮಿಶ್ರಣವು ಗಟ್ಟಿಯಾಗಿ ಗಂಜಿಯಂತಾದಾಗ ಉರಿಯಿಂದ ಇಳಿಸಿ ಪೂರ್ತಿಯಾಗಿ ತಣ್ಣಗಾಗಲು ಬಿಡಿ.
ಹಂತ 4: ಈ ಮಿಶ್ರಣವನ್ನು 6-8 ಗಂಟೆಗಳ ಕಾಲ ಅಥವಾ ರಾತ್ರಿ ಪೂರ್ತಿ ಮುಚ್ಚಿಡಿ. ಇದರಿಂದ ಅಂಬಲಿಗೆ ಸಾಂಪ್ರದಾಯಿಕ ಹುಳಿ ರುಚಿ ಬರುತ್ತದೆ.
ಹಂತ 5: ಬಳಸುವಾಗ ಅದಕ್ಕೆ ಮಜ್ಜಿಗೆ, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಅಥವಾ ಉಪ್ಪಿನಕಾಯಿ ಸೇರಿಸಿಕೊಂಡು ಸವಿದರೆ ಆ ರುಚಿಯೇ ಬೇರೆ

