ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಯೊಂದರ ಮುಖ್ಯಸ್ಥನ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರಿಗೆ ಆಸ್ಪತ್ರೆಯ ಮಹಿಳಾ ಅಕೌಂಟೆಂಟ್ ದೂರು ನೀಡಿದ್ದಾರೆ.
ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಆಸ್ಪತ್ರೆಯ ಮುಖ್ಯಸ್ಥನಿಗೆ ನೋಟಿಸ್ ನೀಡಲಾಗಿದೆ. ಆರೋಪಿ ಸದ್ಯ ಹೊರ ರಾಜ್ಯದಲ್ಲಿದ್ದಾನೆ.
ಕಳೆದ 9 ತಿಂಗಳಿಂದ ಆಸ್ಪತ್ರೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ. ಮೊಬೈಲ್ ನಲ್ಲಿ ಆಕ್ಷೇಪಾರ್ಹ ಮೆಸೇಜ್ ಕಳಿಸಿದ್ದಾರೆ. ತಮಗೆ ಕರೆ ಮಾಡಿ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ವಿಚಾರ ತಿಳಿದು ಪತಿ ನನ್ನ ಜೊತೆ ಜಗಳವಾಡಿದ್ದಾರೆ. ನಂತರ ಆಸ್ಪತ್ರೆ ಕೆಲಸ ಬಿಡುವ ಸ್ಥಿತಿ ಬಂತು ಎಂದು ಮಹಿಳೆ ದೂರಿದ್ದಾರೆ. ಆಸ್ಪತ್ರೆ ಮುಖ್ಯಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್.ಎಸ್.ಆರ್. ಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

