ಬೆಂಗಳೂರು : ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಸ್ವಾಮೀಜಿಯವರ ಮೇಲೆ ಗಂಭೀರ ಆರೋಪ ಮಾಡಲಾಗಿತ್ತು ಎನ್ನಲಾದ ಮಹಿಳೆಯೇ ಇದೀಗ ಮಾಧ್ಯಮಗಳ ಮುಂದೆ ಬಂದು, ಆ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸ್ವಾಮೀಜಿಯವರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ. “ನನ್ನ ಮತ್ತು ಸ್ವಾಮೀಜಿಯವರ ನಡುವೆ ಇರುವುದು ಗುರು ಹಾಗೂ ಭಕ್ತೆಯ ಪವಿತ್ರ ಸಂಬಂಧ ಮಾತ್ರ” ಎಂದು ಅವರು ಹೇಳಿದ್ದಾರೆ. 4 ದಿನದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೂರು ನೀಡಿಲ್ಲ: “ನಾನು ಸ್ವಾಮೀಜಿಯವರ ವಿರುದ್ಧ ಯಾವುದೇ ದೂರು ನೀಡಿಲ್ಲ. ನನ್ನ ಹೆಸರನ್ನು ಬಳಸಿಕೊಂಡು ಬೇರೆಯವರೇ ಯಾರೋ ಈ ಸಂಚು ರೂಪಿಸಿ ದೂರು ನೀಡಿದ್ದಾರೆ” ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಅಸಭ್ಯ ವರ್ತನೆ ನಡೆದಿಲ್ಲ: ಗುರುಗಳು ನನ್ನ ಜೊತೆ ಎಂದೂ ಅಸಭ್ಯವಾಗಿ ವರ್ತಿಸಿಲ್ಲ. ನಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಣಕ್ಕೆ ಬೇಡಿಕೆ ಇಟ್ಟಿಲ್ಲ: “ನಾವು ಗುರುಗಳ ಬಳಿ ಯಾವುದೇ ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ. ಈ ಪ್ರಕರಣದಲ್ಲಿ ಹಣದ ವ್ಯವಹಾರ ಅಥವಾ ಬ್ಲ್ಯಾಕ್‌ಮೇಲ್ ತಂತ್ರ ನಡೆದಿಲ್ಲ” ಎಂದು ಮಹಿಳೆ ತಿಳಿಸಿದ್ದಾರೆ.
ಹಿನ್ನೆಲೆ
ಕಳೆದ ಕೆಲವು ದಿನಗಳಿಂದ ಜಯಮೃತ್ಯುಂಜಯ ಸ್ವಾಮೀಜಿಯವರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ವಿಡಿಯೋ ಕಾಲ್ ಸಂಭಾಷಣೆಯ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಆದರೆ, ಇದೀಗ ಸ್ವತಃ ಮಹಿಳೆಯೇ “ನಾನು ದೂರು ನೀಡಿಲ್ಲ, ನನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ” ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಈ ಬೆಳವಣಿಗೆಯಿಂದಾಗಿ ಸ್ವಾಮೀಜಿಯವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ.

